
ನವದೆಹಲಿ: ಭಾರತದ ಮೇಲಿನ ವಿಶ್ವದ ನಂಬಿಕೆಯೇ ನಮ್ಮ ಅತಿದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಭಾರತೀಯ ಕೃತಕ ಬುದ್ಧಿಮತ್ತೆ(ಎಐ) ಮಾದರಿಗಳು ನೈತಿಕ, ಪಕ್ಷಪಾತವಿಲ್ಲದ, ಪಾರದರ್ಶಕ ಮತ್ತು ದತ್ತಾಂಶ ಗೌಪ್ಯತಾ ತತ್ವಗಳನ್ನು ಆಧರಿಸಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಈ ದೇಶದಿಂದ ಜಾಗತಿಕ ನಾಯಕತ್ವದ ಕಡೆಗೆ ನವೋದ್ಯಮಗಳು ಕೆಲಸ ಮಾಡಬೇಕು. ಭಾರತವು ಕೈಗೆಟುಕುವ ಎಐ, ಅಂತರ್ಗತ ಎಐ ಮತ್ತು ಮಿತವ್ಯಯದ ನಾವೀನ್ಯತೆಯನ್ನು ಜಾಗತಿಕವಾಗಿ ಉತ್ತೇಜಿಸಬಹುದು ಎಂದು ಅವರು ಹೇಳಿದ್ದಾರೆ.
2026ರ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಮುಂಚಿತವಾಗಿ ಭಾರತೀಯ ಎಐ ಸ್ಟಾರ್ಟ್ಅಪ್‌ಗಳೊಂದಿಗೆ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೋದಿ, ಭಾರತೀಯ ಎಐ ಮಾದರಿಗಳು ವಿಭಿನ್ನವಾಗಿರಬೇಕು. ಸ್ಥಳೀಯ ಮತ್ತು ದೇಶೀಯ ವಿಷಯ ಹಾಗೂ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಬೇಕು ಎಂದು ಸೂಚಿಸಿದರು ಎಂಬುದಾಗಿ ಅಧಿಕೃತ ಹೇಳಿಕೆ ತಿಳಿಸಿದೆ.
ನವೋದ್ಯಮ ಮತ್ತು ಕೃತಕ ಬುದ್ಧಿಮತ್ತೆ ಉದ್ಯಮಿಗಳು ದೇಶದ ಭವಿಷ್ಯದ ಸಹ ನಿರ್ಮಾತೃ ಎಂದು ಪ್ರಧಾನಿ ಬಣ್ಣಿಸಿದರು.
ಮುಂದಿನ ತಿಂಗಳು ನಡೆಯಲಿರುವ 'ಎಐ ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್' ಶೃಂಗಸಭೆಗೆ ಅರ್ಹತೆ ಪಡೆದಿರುವ 12 ಭಾರತೀಯ ಕೃತಕ ಬುದ್ಧಿಮತ್ತೆ ನವೋದ್ಯಮಗಳು ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ತಮ್ಮ ಆಲೋಚನೆ ಮತ್ತು ಕೆಲಸಗಳನ್ನು ಮಂಡಿಸಿದವು.
ಸಭೆಯ ಸಂದರ್ಭದಲ್ಲಿ, ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಮೋದಿ ಒತ್ತಿ ಹೇಳಿದರು.
ಭಾರತವು ಮುಂದಿನ ತಿಂಗಳು ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸಲಿದೆ. ಇದರ ಮೂಲಕ ದೇಶವು ತಂತ್ರಜ್ಞಾನ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಎಐ ಅನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತವು ಪರಿವರ್ತನೆ ತರಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.