ಸಂಗ್ರಹ ಚಿತ್ರ
ನವದೆಹಲಿ: ‘ಮೇ 7ರ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ವೇಳೆ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳನ್ನು ಪಾಕಿಸ್ತಾನವು ಹೊಡೆದುರುಳಿಸಿದೆ. ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದಲೇ ನಾವು ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು’ ಎಂದು ಇಂಡೋನೇಷ್ಯಾದಲ್ಲಿರುವ ಭಾರತೀಯ ವಾಯು ಸೇನೆ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದೆ.
ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ನಡೆದ ಸೆಮಿನಾರ್‌ವೊಂದರಲ್ಲಿ ಭಾರತೀಯ ವಾಯು ಸೇನೆಯ ಕ್ಯಾಪ್ಟನ್ ಶಿವಕುಮಾರ್ ಅವರು ಮಾತನಾಡಿದ್ದರು. ಈ ಬಗ್ಗೆ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಈ ವರದಿಯನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು, ‘ಕೇಂದ್ರ ಸರ್ಕಾರವು ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದೆ’ ಎಂದು ಟೀಕಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆಯನ್ನು ಕರೆದು ಅದರ ನೇತೃತ್ವ ವಹಿಸಿಕೊಳ್ಳಲು ಯಾಕೆ ನಿರಾಕರಿಸುತ್ತಿದ್ದಾರೆ. ಪಹಲ್ಗಾಮ್ ದಾಳಿ ಮತ್ತು ‘ಆಪರೇಷನ್ ಸಿಂಧೂರ’ದ ಕುರಿತು ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಬೇಕು ಎನ್ನುವ ವಿರೋಧ ಪಕ್ಷಗಳ ಆಗ್ರಹವನ್ನು ಯಾಕಾಗಿ ಒಪ್ಪಿಕೊಳ್ಳುತ್ತಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದರು.
‘ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ. ಇದನ್ನು ಭಾರತದ ಜನರ ಎದುರು ಕಾಂಗ್ರೆಸ್ ತೆರೆದಿಡುತ್ತದೆ ಎಂದು ಅವರು ಭಯಭೀತರಾಗಿದ್ದಾರೆ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯುತ್ತಿಲ್ಲ’ ಎಂದರು.
ಕ್ಯಾಪ್ಟನ್ ಶಿವಕುಮಾರ್ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆ ಕುರಿತು ಕೇಂದ್ರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.