ADVERTISEMENT

ಭಯೋತ್ಪಾದನೆ: ಪಾಕ್‌ ನಿಜಬಣ್ಣವನ್ನು ರಾಜತಾಂತ್ರಿಕರಿಗೆ ಮನವರಿಕೆ ಮಾಡಿದ ಸೇನೆ

ಎಲ್‌ಒಸಿಯಲ್ಲಿ ಭಯೋತ್ಪಾದನೆ ಚಟುವಟಿಕೆ

ಪಿಟಿಐ
Published 18 ಫೆಬ್ರುವರಿ 2021, 9:38 IST
Last Updated 18 ಫೆಬ್ರುವರಿ 2021, 9:38 IST
ಜಮ್ಮು ಮತ್ತು ಕಾಶ್ಮೀರ ಬುಡ್ಗಾಮ್ ನಗರದ ಮಗಮ್‌ ಪ್ರದೇಶಕ್ಕೆ ಬುಧವಾರ ಯುರೋಪಿಯನ್ ಒಕ್ಕೂಟದ 24 ರಾಯಭಾರಿಗಳ ನಿಯೋಗ  ಭೇಟಿ ನೀಡಿ ಸ್ಥಳೀಯರೊಂದಿಗೆ ಸಭೆ ನಡೆಸಿತು.
ಜಮ್ಮು ಮತ್ತು ಕಾಶ್ಮೀರ ಬುಡ್ಗಾಮ್ ನಗರದ ಮಗಮ್‌ ಪ್ರದೇಶಕ್ಕೆ ಬುಧವಾರ ಯುರೋಪಿಯನ್ ಒಕ್ಕೂಟದ 24 ರಾಯಭಾರಿಗಳ ನಿಯೋಗ  ಭೇಟಿ ನೀಡಿ ಸ್ಥಳೀಯರೊಂದಿಗೆ ಸಭೆ ನಡೆಸಿತು.   

ಶ್ರೀನಗರ: ‘ಗಡಿ ನಿಯಂತ್ರಣ ರೇಖೆ ವ್ಯಾಪ್ತಿಯಲ್ಲಿ ಉಗ್ರರರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಪಾಕಿಸ್ತಾನ ಭಯೋತ್ಪಾಕರನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ನಡೆಸುತ್ತಿದೆ‘ ಎಂದು ಭಾರತೀಯ ಸೇನಾ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ 24 ದೇಶಗಳ ರಾಜತಾಂತ್ರಿಕ ಅಧಿಕಾರಿಗಳಿಗೆ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಾಗಿರುವ ಬದಲಾವಣೆಗಳನ್ನು ಅವಲೋಕಿಸಲು ಬಂದಿರುವ ರಾಜತಾಂತ್ರಿಕ ಅಧಿಕಾರಿಗಳಿಗೆ ವಿವರಣೆ ನೀಡಿದ ಸೇನಾ ಅಧಿಕಾರಿಗಳು, ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿ ಸುರಂಗಗಳ ಮೂಲಕ ಭಯೋತ್ಪಾದಕರು ಭಾರತಕ್ಕೆ ನುಸುಳಲು ನೆರವು ನೀಡುವಲ್ಲಿ ಪಾಕಿಸ್ತಾನ ಸೈನ್ಯದ ಪಾತ್ರವಿರುವ ಅಂಶಗಳನ್ನು ಒತ್ತಿ ಹೇಳಿದರು. ಇದೇ ವೇಳೆ ಪಾಕಿಸ್ತಾನದ ಸೈನ್ಯದ ಗುರುತುಗಳಿರುವ ಹಾಗೂ ವಿವಿಧ ಉಗ್ರರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಕುರಿತು ಮಾಹಿತಿ ನೀಡಿದರು.

ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸೇನೆ ತನ್ನ ತಂತ್ರವನ್ನು ಬದಲಿಸುವ ಜತೆಗೆ, ಗಸ್ತು ತಿರುಗುವುದನ್ನು ಹೆಚ್ಚಿಸಿದ ನಂತರ, ಎಲ್‌ಒಸಿ ಮೂಲಕ ಉಗ್ರ ನುಸುಳುವಿಕೆ ಪ್ರಮಾಣ ಕಡಿಮೆಯಾಗಿ, ಸುರಂಗಗಳ ಮೂಲಕ ಒಳ ನುಸುಳುವ ಪ್ರಯತ್ನ ಹೆಚ್ಚಾಗುತ್ತಿರುವ ಕುರಿತು ಅಧಿಕಾರಿಗಳು ತಿಳಿಸಿದರು.

ADVERTISEMENT

ಸೇನಾ ಅಧಿಕಾರಿಗಳು ಕಾಶ್ಮೀರ ಕಣಿವೆಯ ಪರಿಸ್ಥಿತಿಯನ್ನು ವಿವರಿಸುತ್ತಾ, ಬುಧವಾರ ಸಂಜೆ ಬಿಗಿಭದ್ರತೆಯಿರುವ ಶ್ರೀನಗರ ಪ್ರದೇಶದಲ್ಲಿದ್ದ ಪ್ರಮುಖ ಹೋಟೆಲ್‌ ಮಾಲೀಕರ ಮೇಲೆ ಉಗ್ರರು ಗುಂಡು ಹಾರಿಸಿದ ಘಟನೆಯನ್ನು ರಾಜತಾಂತ್ರಿಕ ಅಧಿಕಾರಿಗಳಿಗೆ ವಿವರಿಸಿದರು. ‘ಇದು ಕಾಶ್ಮೀರದಲ್ಲಿರುವವರು ಉಗ್ರರ ಆಜ್ಞೆಯನ್ನು ನಿರಾಕರಿಸಿದವರನ್ನು ಮೌನವಾಗಿಸುವ ಭಯೋತ್ಪಾದಕರ ಯೋಜನೆಯ ಭಾಗವಾಗಿದೆ‘ ಎಂದು ಸೇನಾಧಿಕಾರಿಗಳು ಹೇಳಿದರು.

ಇದೇ ವೇಳೆ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಸ್ಥಾಪಿತ ಹಿತಾಸಕ್ತಿಗಳು ಹೇಗೆ ಯುವಕರನ್ನು ಸೆಳೆಯುತ್ತಿವೆ ಎಂಬ ಅಂಶವನ್ನು ಅಧಿಕಾರಿಗಳು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.