ADVERTISEMENT

ಚೀನಾ ಗಡಿಯಲ್ಲಿ ನಿಖರ ಕಣ್ಗಾವಲು: ಡಿಆರ್‌ಡಿಒದಿಂದ ಸೇನೆಗೆ ‘ಭಾರತ್’ ಡ್ರೋನ್

ಏಜೆನ್ಸೀಸ್
Published 21 ಜುಲೈ 2020, 11:43 IST
Last Updated 21 ಜುಲೈ 2020, 11:43 IST
ಎನ್‌ಐಚಿತ್ರ
ಎನ್‌ಐಚಿತ್ರ   

ನವದೆಹಲಿ: ಪೂರ್ವ ಲಡಾಖ್‌ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ ಬಳಿ ಇರುವ ಅತ್ಯಂತ ಎತ್ತರದ ಹಾಗೂ ಪರ್ವತ ಪ್ರದೇಶಗಳಲ್ಲಿಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡುವ ಸಲುವಾಗಿರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಭಾರತೀಯ ಸೇನೆಗೆ‘ಭಾರತ್’ ಹೆಸರಿನ ಡ್ರೋನ್‌ಗಳನ್ನು ಹಸ್ತಾಂತರಿಸಿದೆ.

‘ಪೂರ್ವ ಲಡಾಖ್‌ ಪ್ರದೇಶದಲ್ಲಿನ ವಿವಾದಕ್ಕೆ ಸಂಬಂಧಿಸಿದಂತೆ ನಿಖರವಾದ ಕಣ್ಗಾವಲು ನಡೆಸಲು ಭಾರತೀಯ ಸೇನೆಗೆ ಡ್ರೋನ್‌ಗಳ ಅಗತ್ಯವಿದೆ. ಅದಕ್ಕಾಗಿ ಡಿಆರ್‌ಡಿಒ ‘ಭಾರತ್‌’ ಡ್ರೋನ್‌ಗಳನ್ನು ಒದಗಿಸಿದೆ’ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

‘ಭಾರತ್ ಸರಣಿಯ‌ ಡ್ರೋನ್‌ಗಳನ್ನು ವಿಶ್ವದ ಅತ್ಯಂತ ಚುರುಕುಬುದ್ಧಿಯ ಮತ್ತು ಹಗುರ ಕಣ್ಗಾವಲು ಡ್ರೋನ್‌ಗಳ ಪಟ್ಟಿಗೆ ಸೇರಿಸಬಹುದಾಗಿದೆ. ಇದನ್ನು ಡಿಆರ್‌ಡಿಒ ಸ್ಥಳೀಯವಾಗಿ (ಚಂಡೀಗಢದಲ್ಲಿರುವ ಕೇಂದ್ರದಲ್ಲಿ) ಅಭಿವೃದ್ಧಿಪಡಿಸಿವೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಂದುವರಿದು, ‘ಸಣ್ಣ ಹಾಗೂ ಶಕ್ತಿಯುತವಾದ ಈ ಡ್ರೋನ್‌ ಯಾವುದೇ ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು. ಮಿತ್ರರು ಹಾಗೂ ವೈರಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕನುಗುಣವಾಗಿ ಕಾರ್ಯಾಚರಿಸುತ್ತದೆ’ ಎಂದೂ ಹೇಳಿವೆ.

ಅತ್ಯಂತ ಶೀತ ವಾತಾವರಣದಲ್ಲಿಯೂ ಯಾವುದೇ ಹಾನಿಯಾಗದಂತೆ ಇವುಗಳ ವಿನ್ಯಾಸ ಮಾಡಲಾಗಿದೆ. ಅದೇರೀತಿ ಕಠಿಣ ಸನ್ನಿವೇಶಗಳಿಗೆ ಹೊಂದಿಕೆಯಾಗುವಂತೆ ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ.ಕಾರ್ಯಾಚರಣೆ ಸಂದರ್ಭದಲ್ಲಿ ನೈಜ ಸಮಯದ ವಿಡಿಯೊ ಚಿತ್ರೀಕರಿಸಿ ಒದಗಿಸುತ್ತದೆ. ರಾತ್ರಿವೇಳೆಯೂ ಕಾರ್ಯಾಚರಿಸುವ ಸಾಮರ್ಥ್ಯವಿದ್ದು, ದಟ್ಟ ಕಾಡುಗಳಲ್ಲಿ ಅಡಗಿರುವವರನ್ನೂ ಪತ್ತೆ ಮಾಡಬಲ್ಲದು ಎನ್ನಲಾಗಿದೆ.

ಇವು ಕಾರ್ಯಾಚರಿಸುತ್ತಿರುವುದನ್ನು ರಾಡರ್‌ ಮೂಲಕವೂ ಕಂಡುಹಿಡಿಯಲು ಸಾಧ್ಯವಾಗದಂತೆ ಅಭಿವೃದ್ಧಿಪಡಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.