ADVERTISEMENT

ಗಡಿ ಸಂಘರ್ಷ: ಪೂರ್ವ ಲಡಾಖ್‌ ಗಡಿ ಪ್ರದೇಶಗಳಲ್ಲಿ ಹಾರಾಟ ನಡೆಸಲಿದೆ ರಫೇಲ್

20 ಪರ್ವತ ಪ್ರದೇಶಗಳಲ್ಲಿ ಪ್ರಾಬಲ್ಯ ಹೆಚ್ಚಿಸಿದ ಭಾರತೀಯ ಸೇನೆ

ಪಿಟಿಐ
Published 21 ಸೆಪ್ಟೆಂಬರ್ 2020, 3:29 IST
Last Updated 21 ಸೆಪ್ಟೆಂಬರ್ 2020, 3:29 IST
ಲೇಹ್ ಗಡಿ ಪ್ರದೇಶದಲ್ಲಿ ಭಾರತೀಯ ವಾಯುಪಡೆ ವಿಮಾನದಿಂದ ಗಸ್ತು ಕಾರ್ಯಾಚರಣೆ – ರಾಯಿಟರ್ಸ್ ಚಿತ್ರ
ಲೇಹ್ ಗಡಿ ಪ್ರದೇಶದಲ್ಲಿ ಭಾರತೀಯ ವಾಯುಪಡೆ ವಿಮಾನದಿಂದ ಗಸ್ತು ಕಾರ್ಯಾಚರಣೆ – ರಾಯಿಟರ್ಸ್ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ ಗಡಿ ಪ್ರದೇಶದಲ್ಲಿ ವ್ಯೂಹಾತ್ಮಕವಾಗಿ ಮುಖ್ಯವಾಗಿರುವ 20 ಪರ್ವತ ಪ್ರದೇಶಗಳ ಮೇಲೆ ಭಾರತೀಯ ಸೇನೆ ಪ್ರಾಬಲ್ಯ ಹೆಚ್ಚಿಸಿದೆ. ಪಾಂಗಾಂಗ್ ಸರೋವರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಗಡಿ ಬಿಕ್ಕಟ್ಟು ಶಮನಕ್ಕೆ ಭಾರತ–ಚೀನಾ ಸೇನಾ ಕಮಾಂಡರ್‌ಗಳ ನಡುವೆ ಮಾತುಕತೆ ನಡೆಯಲಿದೆ. ಈ ಮಧ್ಯೆ, ಚೀನಾ ಸೇನೆಯ ಪ್ರಚೋದನೆ ಕೃತ್ಯಗಳಿಗೆ ಉತ್ತರವಾಗಿ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್‌ ಅನ್ನು ಲಡಾಖ್‌ ಪ್ರದೇಶದಲ್ಲಿ ಹಾರಾಟ ನಡೆಸಲು ವಾಯುಪಡೆ ಸಜ್ಜಾಗಿದೆ. ಭಾರತದ ಯುದ್ಧಸನ್ನದ್ಧತೆಯನ್ನು ಪ್ರದರ್ಶಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಮೂಲಗಳು ಹೇಳಿವೆ. ರಫೇಲ್ ಯುದ್ಧವಿಮಾನವನ್ನು ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ ನಿಯೋಜನೆಗೊಳಿಸಲಾಗಿದೆ.

ಸಂಘರ್ಷ ಶಮನಕ್ಕೆ ಉಭಯ ದೇಶಗಳು ಮಾಡಿಕೊಂಡಿರುವ ಐದು ಅಂಶಗಳ ಸೂತ್ರವನ್ನು ಅನುಷ್ಠಾನಕ್ಕೆ ತರುವ ಕುರಿತು ಕಮಾಂಡರ್‌ ಮಟ್ಟದ ಮಾತುಕತೆ ವೇಳೆ ಚರ್ಚೆ ನಡೆಯಲಿದೆ.

ADVERTISEMENT

ಗಡಿ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತ–ಚೀನಾ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಮತ್ತು ವಾಂಗ್‌ ಯಿ ಕಳೆದ ವಾರ ಒಮ್ಮತಕ್ಕೆ ಬಂದಿದ್ದರು. ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಮಾವೇಶದ ಸಂದರ್ಭದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದರು. ಆ ಸಂದರ್ಭ, ಗಡಿಯಲ್ಲಿನ ಸಂಘರ್ಷ ತಪ್ಪಿಸುವುದಕ್ಕಾಗಿ ದ್ವಿಪಕ್ಷೀಯವಾದ ಎಲ್ಲ ಒಪ್ಪಂದಗಳಿಗೆ ಚೀನಾವು ಕಟ್ಟುನಿಟ್ಟಿನ ಬದ್ಧತೆ ತೋರಬೇಕು ಎಂದು ಜೈಶಂಕರ್‌ ಅವರು ವಾಂಗ್‌ಗೆ ಹೇಳಿದ್ದರು.

ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು, ಉದ್ವಿಗ್ನ ಪರಿಸ್ಥಿತಿ ಹೆಚ್ಚಿಸುವಂಥ ಚಟುವಟಿಕೆಗಳಿಗೆ ಆಸ್ಪದ ನೀಡದಿರುವುದು, ಗಡಿ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಒಪ್ಪಂದಗಳಿಗೆ ಬದ್ಧರಾಗಿರುವುದು ಮತ್ತು ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಒಮ್ಮತಕ್ಕೆ ಬರಲಾಗಿತ್ತು. ಈ ವಿಚಾರವನ್ನು ಅನುಷ್ಠಾನಗೊಳಿಸುವ ಬಗ್ಗೆ ಮುಂದೆ ನಡೆಯಲಿರುವ ಕಮಾಂಡರ್‌ ಮಟ್ಟದ ಮಾತುಕತೆ ವೇಳೆ ಚರ್ಚೆಯಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.