ಅಹಮದಾಬಾದ್: ರಾಜ್ಯದಲ್ಲಿ ಸೇನಾಕಾರ್ಯಾಚರಣೆ ಮಾಡುವಾಗ ಅಗತ್ಯ ನೆರವನ್ನು ನೀಡುವ ಮೂಲಕ ಕಾರ್ಯಚರಣೆಯ ವೇಳೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸೇನಾಧಿಕಾರಿಗಳ ಭೇಟಿಯ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ಹೇಳಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿ ಕಂಟ್ರೂಲ್ ರೂಮ್ ಹಾಗೂ ತುರ್ತುನಿಗಾ ಘಟಕ ಸ್ಥಾಪಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿನ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ. ನಾಗರಿಕ ಸುರಕ್ಷೆ ಹಾಗೂ ಆರೋಗ್ಯ ಸೇವೆಗಳಿಗೆ ಮಹತ್ವ ನೀಡಲಾಗುತ್ತದೆ ಎಂದರು.
‘ಆಪರೇಷನ್ ಸಿಂಧೂರ’ನಂತರ, ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆಯ ಕಾರಣ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು, ಪೊಲೀಸ್, ಗಡಿಜಿಲ್ಲೆಗಳ ಜಿಲ್ಲಾಧಿಕಾರಿಗಳು, ಭೂ ಸೇನೆ, ವಾಯು ಸೇನೆ, ಜಲ ಸೇನೆಯ ಅಧಿಕಾರಿಗಳು, ಹಾಗೂ ಗಡಿ ರಕ್ಷಣಾ ಪಡೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸೇನಾ ಕಾರ್ಯಾಚರಣೆ ಸಮಯದಲ್ಲಿ ಸರ್ಕಾರಿ ಇಲಾಖೆಗಳು ಹಾಗೂ ಸೇನೆಯ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ, ಇಂದು ಬೆಳಗ್ಗೆ ಗುಜರಾತಿನ ಗಾಂಧಿನಗರದಲ್ಲಿ ಸೇನಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳ ಜೊತೆ ಸಭೆ ನಡೆದಿದೆ. ಸೇನೆಯ ಶೌರ್ಯಕ್ಕೆ, ಜನರ ಪರವಾಗಿ ಮುಖ್ಯಮಂತ್ರಿಗಳು ಧನ್ಯವಾದ ತಿಳಿಸಿದ್ದಾರೆ. ಸೇನೆಯ ಕಾರ್ಯಾಚರಣೆಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎಲ್ಲಾ ವಿಭಾಗಗಳ ಕೆಲಸದ ಪ್ರಗತಿಯನ್ನು ಮುಖ್ಯಮಂತ್ರಿಗಳು ಗಮನಿಸಿದ್ದಾರೆ ಎಂದು ರಾಜ್ಯ ಗೃಹಸಚಿವ ಹರ್ಷ ಸಿಂಘ್ವಿ ತಿಳಿಸಿದ್ದಾರೆ.
ಗುರುವಾರ ರಾತ್ರಿ ಪಾಕಿಸ್ತಾನವು ಜಮ್ಮು, ಪಠಾಣ್‌ಕೋಟ್, ಉದಮ್‌ಪುರ ಸೇರಿದಂತೆ ಭಾರತದ ಹಲವು ಪ್ರದೇಶಗಳ ಮೇಲೆ ಡ್ರೋಣ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿತ್ತು. ಭಾರತೀಯ ಸೇನೆಯು ಆ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತ್ತು. ಮುಂಜಾಗ್ರತ ಕ್ರಮವಾಗಿ ಗುಜರಾತ್‌ನ ಕಛ್, ಜಾಮ್‌ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ7ಗಂಟೆಗೂ ಅಧಿಕ ಕಾಲ ಬ್ಲಾಕ್ಔಟ್ ಪರಿಸ್ಥಿತಿ ಉಂಟಾಗಿತ್ತು.
ಪಾಕಿಸ್ತಾನದ ಜೊತೆಗೆ ಗಡಿ ಹಂಚಿಕೊಂಡಿರುವ ಕಛ್, ಜಾಮ್‌ನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜನರು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಜಿಲ್ಲಾಡಳಿತ ನೀಡುವ ಮಾಹಿತಿಯ ಮೊರೆ ಹೋಗುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.