ADVERTISEMENT

ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ ರಾಜಿ ಇಲ್ಲ: ಚೀನಾಕ್ಕೆ ಭಾರತ ಸ್ಪಷ್ಟ ಸಂದೇಶ

ಪಿಟಿಐ
Published 4 ಆಗಸ್ಟ್ 2020, 1:41 IST
Last Updated 4 ಆಗಸ್ಟ್ 2020, 1:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು ಎಂದು ಭಾರತೀಯ ಸೇನೆಯು ಚೀನಾದ ‘ಪೀಪಲ್ಸ್ ಲಿಬರೇಷನ್ ಆರ್ಮಿ’ಗೆ ಸ್ಪಷ್ಟವಾಗಿ ತಿಳಿಸಿದೆ.

ಪಾಂಗಾಂಗ್ ತ್ಸೊ ಸೇರಿದಂತೆ ಪೂರ್ವ ಲಡಾಖ್‌ನ ಇತರ ಪ್ರದೇಶಗಳಿಂದ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದೂ ಸೂಚಿಸಿದೆ. 5ನೇ ಸುತ್ತಿನ ಸೇನಾ ಮಾತುಕತೆ ವೇಳೆ ಈ ವಿಷಯವನ್ನು ತಿಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉಭಯ ಸೇನಾ ಪಡೆಗಳ ಹಿರಿಯ ಕಮಾಂಡರ್‌ಗಳು ಭಾನುವಾರ ಸುಮಾರು 11 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ADVERTISEMENT

ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾ ಸ್ಥಿತಿ ಕಾಯ್ದುಕೊಳ್ಳುವುದು ಎರಡೂ ದೇಶಗಳ ಎಲ್ಲ ರೀತಿಯ ಬಾಂಧವ್ಯ ಉಳಿಸಿಕೊಳ್ಳಲು ಅಗತ್ಯ. ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ಚೀನಾ ಖಾತರಿಪಡಿಸಬೇಕು ಎಂದೂ ಭಾರತೀಯ ಸೇನೆ ಹೇಳಿದೆ.

ಗಾಲ್ವನ್ ಕಣಿವೆ ಮತ್ತು ಇತರ ಕೆಲವು ಪ್ರದೇಶಗಳಿಂದ ಚೀನಾ ಪಡೆಗಳು ಹಿಂದೆ ಸರಿದಿವೆ. ಆದರೂ ಪಾಂಗಾಂಗ್ ತ್ಸೊ ಪ್ರದೇಶದ ‘ಫಿಂಗರ್–4’, ‘ಫಿಂಗರ್–8’ ಗಡಿ ಭಾಗದಿಂದ ಹಿಂದೆ ಸರಿದಿಲ್ಲ. ಗೊಗ್ರಾ ಪ್ರದೇಶದಿಂದಲೂ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಚೀನಾ ಇನ್ನೂ ಪೂರ್ಣಗೊಳಿಸಿಲ್ಲ.

ಮಾತುಕತೆ ವೇಳೆ ಎಲ್‌ಎಸಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು, ಅನೇಕ ಪ್ರದೇಶಗಳಿಂದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಉಭಯ ದೇಶಗಳ ನಡುವಣ ರಾಜಕೀಯ ಮತ್ತು ಸೇನಾ ಬಾಂಧವ್ಯ ಕುರಿತು ಹೆಚ್ಚಿನಒತ್ತು ನೀಡಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.