ಶುಭಾಂಶು ಶುಕ್ಲಾ
– ಪಿಟಿಐ ಚಿತ್ರ
ನವದೆಹಲಿ, ಲಖನೌ: ‘ನಾನು ನಾಚಿಕೆ, ಸಂಕೋಚ ಸ್ವಭಾವದ ವ್ಯಕ್ತಿಯಾಗಿ ಬೆಳೆದೆ. ಆದರೆ, ಚಿಕ್ಕವನಿದ್ದಾಗಿನಿಂದಲೂ ಬಾಹ್ಯಾಕಾಶಕ್ಕೆ ಹಾರುವ ಕನಸು ಕಂಡಿರಲಿಲ್ಲ’ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಹೇಳಿದರು.
ಭಾರತೀಯ ವಾಯುಪಡೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶುಕ್ಲಾ ಅವರು ‘ಬಾಹ್ಯಾಕಾಶಕ್ಕೆ ಹಾರುವ ಕನಸಿಲ್ಲದಿದ್ದರೂ, ಬಾಲ್ಯದಿಂದ ಗಗನಯಾನಿ ರಾಕೇಶ್ ಶರ್ಮಾ ಅವರ ಬಾಹ್ಯಾಕಾಶಯಾನದ ಕಥೆಗಳನ್ನು ಕೇಳುತ್ತಾ ಬೆಳೆದೆ’ ಎಂದು ವಿವರಿಸಿದರು.
ಶುಕ್ಲಾ ಅವರು, ‘ಆಕ್ಸಿಯಂ–4’ರ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದಾಗಿನ ಅನುಭವಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶುಲ್ಕಾ ಸೇರಿ ನಾಲ್ವರು ಗಗನಯಾತ್ರಿಗಳನ್ನು ಸನ್ಮಾನಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಗಗನಯಾನ ಮಿಷನ್, ಆತ್ಮನಿರ್ಭರ ಭಾರತದ ಪ್ರಯಾಣದಲ್ಲಿ ‘ಹೊಸ ಅಧ್ಯಾಯ’ ವನ್ನು ಸೂಚಿಸುತ್ತಿದೆ’ ಎಂದು ಪ್ರತಿಪಾದಿಸಿದರು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆ ಲಖನೌಗೆ ಸೋಮವಾರ ಭೇಟಿ ನೀಡುತ್ತಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಸ್ವಾಗತಿಸಲು ಇಲ್ಲಿ ಅದ್ಧೂರಿ ಸಿದ್ಧತೆ ನಡೆದಿದೆ.
ತಮ್ಮೂರಿನ ಹುಡುಗನನ್ನು ಸ್ವಾಗತಿಸಲು ಸ್ಥಳೀಯರು, ಕುಟುಂಬದ ಸದಸ್ಯರು ಉತ್ಸಕರಾಗಿದ್ದಾರೆ. ಬೆಳಿಗ್ಗೆ 8.45ಕ್ಕೆ ಲಖನೌ ವಿಮಾನ ನಿಲ್ದಾಣ ತಲುಪಲಿರುವ ಶುಕ್ಲಾ ಅವರು ಮೂರು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಶುಕ್ಲಾ ವಿದ್ಯಾಭ್ಯಾಸ ಮಾಡಿದ ‘ದಿ ಸಿಟಿ ಮಾಂಟೆಸ್ಸರಿ ಶಾಲೆ’(ಸಿಎಂಎಸ್)ಯವರು, ತಮ್ಮ ವಿದ್ಯಾರ್ಥಿಯ ಸಾಧನೆಯನ್ನು ಗೌರವಿಸಲು ‘ಗ್ರಾಂಡ್ ವಿಕ್ಟರಿ ಪರೇಡ್’ ಆಯೋಜಿಸಿದ್ದಾರೆ. ಮೂಲಕಗಳ ಪ್ರಕಾರ 63 ಸಾವಿರ ಸಿಎಂಎಸ್ ವಿದ್ಯಾರ್ಥಿಗಳೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.