ಗಗನಯಾನಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ
ಪಿಟಿಐ ಚಿತ್ರ
ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿ ಭೇಟಿ ನೀಡಿದ ನಂತರ ಗಗನಯಾನಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾರತಕ್ಕೆ ಭಾನುವಾರ ಮರಳಲಿದ್ದಾರೆ.
2027ರಲ್ಲಿ ಇಸ್ರೊ ಕೈಗೊಳ್ಳಲು ಉದ್ದೇಶಿಸಿರುವ ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಾಸಾ ಜತೆಗೂಡಿ ನಡೆಸಿದ ಮಾನವ ಸಹಿತ ಬಾಹ್ಯಾಕಾಶ ಯಾನದಲ್ಲಿ ಶುಭಾಂಶು ಶುಕ್ಲ ಅವರು ಇತರ ಮೂವರು ಗಗನಯಾನಿಗಳೊಂದಿಗೆ ಪಾಲ್ಗೊಂಡಿದ್ದರು.
ಕಳೆದ ಒಂದು ವರ್ಷದಿಂದ ಶುಭಾಂಶು ಅವರು ಅಮೆರಿಕದಲ್ಲಿದ್ದು ಆಕ್ಸಿಯಂ–4 ಯೋಜನೆಯ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಭಾನುವಾರ ಭಾರತಕ್ಕೆ ಮರಳಿರುವ ಅವರು, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ತಮ್ಮ ಊರು ಉತ್ತರ ಪ್ರದೇಶದ ಲಖನೌಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಾದ ನಂತರ ದೆಹಲಿಯಲ್ಲಿ ಆ. 22 ಹಾಗೂ 23ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ವಿಮಾನದಲ್ಲಿ ಕುಳಿತು ನಗು ಚೆಲ್ಲಿದ ಚಿತ್ರವನ್ನು ಶುಕ್ಲಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ’ಮನೆಗೆ ಹೊರಡಲು ಸಿದ್ಧಗೊಂಡಿದ್ದು, ತಮ್ಮ ಅನುಭವವನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
‘ಆದರೆ ಅಮೆರಿಕದಲ್ಲಿನ ಅದ್ಭುತ ತಂಡವೊಂದನ್ನು ತೊರೆದು ಹೊರಟಿರುವ ಬೇಸರ ಆವರಿಸಿದೆ. ಕಳೆದ ಒಂದು ವರ್ಷದಿಂದ ಅವರೂ ನನ್ನಂತೆಯೇ ಮನೆ, ಕುಟುಂಬ ಹಾಗೂ ಸ್ನೇಹಿತರನ್ನು ತೊರದು ಈ ಯೋಜನೆಗಾಗಿ ಜತೆಗೂಡಿದ್ದ ತಂಡದವರನ್ನು ಬಿಟ್ಟು ಹೋಗುವುದು ತೀವ್ರ ಭಾವುಕನನ್ನಾಗಿಸಿದೆ. ಆದರೆ ಮತ್ತೊಂದೆ ನನ್ನ ದೇಶದಲ್ಲಿ ನನ್ನ ಅನುಭವ ಆಲಿಸಲು ಕಾದಿರುವ ನನ್ನ ದೇಶದ ಜನರನ್ನು ಸೇರಲು ಅಷ್ಟೇ ಉತ್ಸುಕನಾಗಿದ್ದೇನೆ. ಹೀಗಾಗಿ ಇದು ನನ್ನಲ್ಲಿ ಮಿಶ್ರಭಾವ ಮೂಡಿಸಿದೆ’ ಎಂದಿದ್ದಾರೆ.
‘ಯೋಜನೆಯ ಅವಧಿಯಲ್ಲಿ ಪ್ರತಿಯೊಬ್ಬರೂ ಅದ್ಭುತ ಬೆಂಬಲ ನೀಡಿದ್ದರು. ವಿದಾಯ ಹೇಳುವುದು ಕಠಿಣ. ಆದರೆ ಬದುಕಿನಲ್ಲಿ ಮುಂದೆ ಸಾಗುತ್ತಲೇ ಇರಬೇಕಾದ್ದು ಅನಿವಾರ್ಯ. ನಮ್ಮ ಯೋಜನೆಯ ಕಮಾಂಡರ್ ಆಗಿದ್ದ ಪೆಗ್ಗಿ ವಿಟ್ಸನ್ ಅವರು ಪ್ರೀತಿಯಿಂದ ಹೇಳುತ್ತಿದ್ದ ಮಾತೊಂದು ನೆನಪಾಗುತ್ತಿದೆ. ‘ಬಾಹ್ಯಾಕಾಶನೌಕೆಯಲ್ಲಿ ನಿರಂತರವಾಗಿರುವುದೆಂದರೆ ಅದು ಬದಲಾವಣೆ’. ಇದು ಎಲ್ಲರ ಬದುಕಿಗೂ ಅನ್ವಯಿಸುತ್ತದೆ ಎಂಬುದು ನನ್ನ ಭಾವನೆ’ ಎಂದಿದ್ದಾರೆ.
ಅಂತಿಮವಾಗಿ ಬಾಲಿವುಡ್‌ನ ಸ್ವದೇಶ್ ಚಿತ್ರದ ಗೀತೆ, ‘ಯೂಂ ಹಿ ಚಲ್ ಚಲ್ ರಾಹಿ– ಜೀವನ್ ಗಾಡಿ ಹೈ...’ ಗೀತೆಯನ್ನು ನೆನಪಿಸಿಕೊಂಡಿದ್ದಾರೆ.
ಅಮೆರಿಕದ ಹ್ಯೂಸ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶುಕ್ಲಾ ಅವರ ಬದಲಿ ಗಗನಯಾನಿ ಪ್ರಶಾಂತ್ ನಾಯರ್ ಪಾಲ್ಗೊಂಡಿದ್ದಾರೆ.
ಆಕ್ಸಿಯಂ 4 ಯೋಜನೆಯ ಭಾಗವಾಗಿದ್ದ ಶುಭಾಂಶು ಶುಕ್ಲಾ ಅವರು ಜೂನ್ 25ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾನ ಆರಂಭಿಸಿದ್ದರು. ಒಟ್ಟು 18 ದಿನಗಳ ಈ ಯೋಜನೆಯಲ್ಲಿ ಇವರೊಂದಿಗೆ ಪಿಗ್ಗಿ ವಿಟ್ಸನ್, ಜುಲೈ 15ರಂದು ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೊಸ್ಜ್ ಉಜ್ನಾನ್‌ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.