ADVERTISEMENT

‘ಪೌರತ್ವ ನೀಡಿ, ಇಲ್ಲ ಗಡಿಪಾರು ಮಾಡಿ’ : ಮಾಜಿ ಉಗ್ರರ ಪತ್ನಿಯರ ಮನವಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 18:32 IST
Last Updated 12 ಜುಲೈ 2019, 18:32 IST
   

ಶ್ರೀನಗರ: ‘ಭಾರತದ ಪೌರತ್ವ ನೀಡಿ. ಇಲ್ಲವೇ ನಮ್ಮನ್ನು ಗಡಿಪಾರು ಮಾಡಿ’ ಎಂದು ಕಾಶ್ಮೀರಿ ಉಗ್ರರನ್ನು ಮದುವೆಯಾಗಿರುವ ಪಾಕಿಸ್ತಾನಿ ಮಹಿಳೆಯರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.

‘ನಾವು 350 ಮಹಿಳೆಯರಿದ್ದೇವೆ. ಭಾರತದ ಪ್ರಜೆಯನ್ನು ವಿವಾಹವಾದ ವಿದೇಶಿ ಮಹಿಳೆಗೆ ಪೌರತ್ವ ನೀಡುವಂತೆ ನಮಗೂ ನೀಡಿ. ಇಲ್ಲವೇ ಪಾಸ್‌ಪೋರ್ಟ್, ಸಂಚಾರ ಪರವಾನಗಿ ನೀಡಿ ಗಡಿಪಾರು ಮಾಡಿ’ ಎಂದು ಅಬೋಟಾಬಾದ್‌ ನಿವಾಸಿ, ಮಾಜಿ ಉಗ್ರನ ಪತ್ನಿ ತಾಯೀಬಾ ಮನವಿ ಮಾಡಿದ್ದಾರೆ.

‘ಕಾಶ್ಮೀರದ ಉಗ್ರರು ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿಗೆ ತೆರಳಿದ್ದಾಗ ಮದುವೆಯಾಗಿ ಭಾರತಕ್ಕೆ ಕರೆತಂದಿದ್ದು, ಹಲವರು ಮೃತರಾಗಿದ್ದರೆ, ಕೆಲವರು ಜೈಲಿನಲ್ಲಿದ್ದಾರೆ. ನಮ್ಮ ಅವಸ್ಥೆಯನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹಾಗೂ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳಿಗೆ ಹೋರಾಡುತ್ತಿರುವ ಸಂಘ–ಸಂಸ್ಥೆಗಳು ನಮ್ಮ ಕಷ್ಟವನ್ನು ಬಗೆಹರಿಸಲು ಭಾರತ–ಪಾಕ್‌ ಜೊತೆ ಮಾತುಕತೆ ಏರ್ಪಡಿಸಬೇಕು. ರಾಜ್ಯ ಸರ್ಕಾರ ರದ್ದು ಪಡಿಸಿರುವ ಪರವಾನಗಿಯನ್ನು ನಮಗೆ ನೀಡಬೇಕು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ನಮ್ಮ ಕುಟುಂಬವನ್ನು ಸೇರಲು ಸಹಾಯ ಮಾಡಬೇಕು’ ಎಂದು ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.