ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟವಾಗಲಿದೆ ಎಂಬ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದು ಕೇಂದ್ರ ಆರೋಗ್ಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಾವು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಗುರುತಿಸುವುದು ಅಪ್ರಸ್ತುತ ಎಂದು ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರೋಗ್ಯವಂತ ರಾಷ್ಟ್ರ ಮಾತ್ರ ನಿಜವಾಗಿಯೂ ಅಭಿವೃದ್ಧಿ ಹೊಂದಿದ ದೇಶವಾಗಬಹುದು ಎಂದರು.
'ಆರೋಗ್ಯವಂತ ಭಾರತ' ಮತ್ತು 'ಎಲ್ಲರಿಗೂ ಆರೋಗ್ಯ' ಇವು ಘೋಷಣೆಗಳಲ್ಲದೇ ಸರ್ಕಾರದ ಬದ್ಧತೆಯಾಗಿವೆ ಎಂದರು. ಆರೋಗ್ಯ ಕ್ಷೇತ್ರದಲ್ಲಿನ ಭಾರತದ ಹೂಡಿಕೆ ಮುಂದುವರೆದ ದೇಶಗಳಿಗಿಂತಲೂ ಹೆಚ್ಚು ಎಂದರು.
ದೇಶದ ಅತ್ಯಂತ ಹಳೆಯ ವೈದ್ಯಕೀಯ ಸಂಸ್ಥೆಗಳಲ್ಲಿ ಇದು ಒಂದಾಗಿದೆ. ಸುಮಾರು 110 ವರ್ಷಗಳ ಇತಿಹಾಸ ಹೊದಿರುವ ಈ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುತ್ತಿದೆ ಎಂದರು.
ವಾರ್ಷಿಕವಾಗಿ 240 ವಿದ್ಯಾರ್ಥಿಗಳಿಗೆ ಪದವಿ, 200 ವೈದ್ಯರಿಗೆ ವಿಶೇಷ ಪದವಿಗಳನ್ನು ನೀಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ನುರಿತ, ಸಮರ್ಥ ವೃತ್ತಿಪರ ವೈದ್ಯರನ್ನು ಒದಗಿಸುತ್ತದೆ ಎಂಬುದು ಗಮನಾರ್ಹ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.