ಹೈದರಾಬಾದ್: ‘ಭಾರತದ ಕಾನೂನು ವ್ಯವಸ್ಥೆಯು ಸದ್ಯ ವಿಶಿಷ್ಟವಾದ ಸವಾಲನ್ನು ಎದುರಿಸುತ್ತಿದೆ ಮತ್ತು ಕೆಲ ಪ್ರಕರಣಗಳು ದಶಕಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಯುತ್ತಿವೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಶನಿವಾರ ಹೇಳಿದ್ದಾರೆ.
ಹೈದರಾಬಾದ್‌ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಭಾಷಣ ಮಾಡಿ ಅವರು ಮಾತನಾಡಿದರು.
‘ಕೆಲವೊಂದು ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿ ಹಲವು ವರ್ಷಗಳ ಸೆರೆವಾಸಗಳ ನಂತರ ನಿರಪರಾಧಿ ಎಂದು ಸಾಬೀತಾಗುತ್ತದೆ. ನಾವು ಇಂದು ಎದುರಿಸುತ್ತಿರುವ ಇಂಥ ಹಲವು ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಪ್ರತಿಭೆ ನೆರವಾಗಲಿದೆ’ ಎಂದಿದ್ದಾರೆ.
‘ನಿರಪರಾಧಿ ತಪ್ಪಿತಸ್ಥನಾಗುತ್ತಾನೆ ಹಾಗೂ ತಪ್ಪಿತಸ್ಥ ಮುಕ್ತವಾಗಿ ಓಡಾಡಿಕೊಂಡಿರುತ್ತಾನೆ. ನಮ್ಮ ಅವ್ಯವಸ್ಥಿತ ಕಾನೂನಿನ ವಿರೋಧಾಭಾಸಗಳಿವು. ನಮ್ಮ ಕಾನೂನು ವ್ಯವಸ್ಥೆಯನ್ನು ಸರಿಪಡಿಸಬೇಕಾದ ಜರೂರು ಈಗ ಎದುರಾಗಿದೆ. ಈ ಸವಾಲಿನ ಕುರಿತು ನಮ್ಮ ನಾಗರಿಕರು ಧ್ವನಿ ಎತ್ತಲಿದ್ದಾರೆ ಎಂಬ ಆಶಾಭಾವ ನನ್ನದು’ ಎಂಬ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜೆಡ್ ಎಸ್. ರಾಕಾಫ್ ಅವರ ಮಾತುಗಳನ್ನು ನ್ಯಾ. ಗವಾಯಿ ಉಲ್ಲೇಖಿಸಿದರು.
‘ಕಾನೂನು ಪದವಿ ಪಡೆದ ನಮ್ಮ ವಿದ್ಯಾರ್ಥಿಗಳು ಸಮಗ್ರತೆಗಾಗಿ ಒಬ್ಬ ಉತ್ತಮ ಮಾರ್ಗದರ್ಶಕನನ್ನು ಹುಡುಕಿಕೊಳ್ಳಬೇಕೇ ಹೊರತು ತಮ್ಮ ಶಕ್ತಿ ಪ್ರದರ್ಶನಕ್ಕಲ್ಲ. ಹಾಗೆಯೇ ಕುಟುಂಬದವರ ಮೇಲೆ ಆರ್ಥಿಕ ಒತ್ತಡ ಸೃಷ್ಟಿಸುವ ಬದಲು, ಶಿಷ್ಯವೇತನ ಬಳಸಿಕೊಂಡು ವಿದೇಶಗಳಿಗೆ ಹೋಗಿ ಕಲಿಯಿರಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಎ. ರೇವಂತ ರೆಡ್ಡಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ರಾವ್, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಜೊಯ್ ಪೌಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.