ಬಂಧನ
(ಪ್ರಾತಿನಿಧಿಕ ಚಿತ್ರ)
ಜೈಪುರ: ಪಾಕಿಸ್ತಾನದ ಹ್ಯಾಂಡ್ಲರ್ ಬಳಿ ಹಣ ಪಡೆದು ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ದೆಹಲಿಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿದ್ದ ಭಾರತೀಯ ನೌಕಾಪಡೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಶಾಲ್ ಯಾದವ್ ಬಂಧಿತ ಆರೋಪಿ. ಇವರು ಆಪರೇಷನ್ ಸಿಂಧೂರ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ದಾಳಿಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಯಾದವ್ ಹರಿಯಾಣದ ರೇವರಿ ಜಿಲ್ಲೆಯ ಮೂಲದವರು. ಭಾರತದ ಮಹಿಳೆಯ ಸೋಗಿನಲ್ಲಿದ್ದ ಪಾಕಿಸ್ತಾನದ ಹ್ಯಾಂಡ್ಲರ್ ಜತೆಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಯಾದವ್ ಮಹಿಳೆಯಿಂದ ₹2 ಲಕ್ಷ ಹಣವನ್ನು ಪಡೆದಿದ್ದಾರೆ. ಅದರಲ್ಲಿ ಆಪರೇಷನ್ ಸಿಂಧೂರ ಮಾಹಿತಿ ಹಂಚಿಕೊಂಡು ₹50 ಸಾವಿರ ಹಣ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವು ಏಜೆನ್ಸಿಗಳು ನಡೆಸಿದ ಜಂಟಿ ಕಾರ್ಯಾಚರಣೆಯ ವೇಳೆ ಯಾದವ್ ಮಾಹಿತಿ ಹಂಚಿಕೊಂಡಿರುವುದು ಬಹಿರಂಗವಾಗಿದ್ದು, ಬುಧವಾರ ಜೈಪುರದಲ್ಲಿ ಅವರನ್ನು ಬಂಧಿಸಲಾಗಿದೆ.
ಪ್ರಿಯಾ ಶರ್ಮಾ ಹೆಸರಿನಲ್ಲಿದ್ದ ನಕಲಿ ಫೇಸ್ಬುಕ್ ಖಾತೆಯ ಮೂಲಕ ಯಾದವ್ ಅವರನ್ನು ಮಹಿಳೆ ಸಂಪರ್ಕಿಸಿದ್ದರು, ದಿನಕಳೆದಂತೆ ಫೋನ್ ನಂಬರ್ ಬದಲಾಗಿದ್ದು, ನಿರಂತರವಾಗಿ ಸಂದೇಶಗಳು ರವಾನೆಯಾಗುತ್ತಿತ್ತು. ಆರಂಭದಲ್ಲಿ ಯಾದವ್, ₹5–6 ಸಾವಿರ ಹಣವನ್ನು ಪಡೆದುಕೊಳ್ಳುತ್ತಿದ್ದರು, ಮಹಿಳೆ ಹೆಚ್ಚಿನ ಹಣ ನೀಡುವುದಾಗಿಯೂ ಇನ್ನಷ್ಟು ಮಾಹಿತಿ ನೀಡುವಂತೆ ಕೇಳಿಕೊಂಡಿದ್ದು ಯಾದವ್ ರಕ್ಷಣಾ ಸಚಿವಾಲಯದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದೂ ಪೊಲೀಸರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.