ಹೈದರಾಬಾದ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ(ಡಿಆರ್‌ಡಿಒ) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ಸಿಡಿಮದ್ದು ‘ಮಲ್ಟಿ ಇನ್‌ಫ್ಲುಯೆನ್ಸ್ ಗ್ರೌಂಡ್ ಮೈನ್’(ಎಂಐಜಿಎಂ)ನ ಪರೀಕ್ಷಾರ್ಥ ಪ್ರಯೋಗವನ್ನು ಮಂಗಳವಾರ ಯಶಸ್ವಿಯಾಗಿ ನಡೆಸಲಾಗಿದೆ.
ಡಿಆರ್‌ಡಿಒ ಹಾಗೂ ನೌಕಾಪಡೆ ಜಂಟಿಯಾಗಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ಆಳ ಸಮುದ್ರದಲ್ಲಿ ಯುದ್ಧ ನಡೆಸುವ ಸಾಮರ್ಥ್ಯ ಸಾಬೀತುಪಡಿಸಿದಂತಾಗಿದೆ.
‘ನೌಕಾಪಡೆಗೆ ಸೇರ್ಪಡೆ ಮಾಡುವುದಕ್ಕೆ ಈ ಸಿಡಿಮದ್ದು ವ್ಯವಸ್ಥೆಯು ಸಿದ್ಧವಾಗಿರುವುದನ್ನು ಈ ಪರೀಕ್ಷಾರ್ಥ ಪ್ರಯೋಗ ದೃಢೀಕರಿಸಿದೆ’ ಎಂದು ಡಿಆರ್‌ಡಿಒ ಮುಖ್ಯಸ್ಥ ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಡಾ.ಸಮೀರ್ ವಿ.ಕಾಮತ್ ಹೇಳಿದ್ದಾರೆ.
‘ಎಂಐಜಿಎಂ ಮುಂದಿನ ತಲೆಮಾರಿನ ಸಿಡಿಮದ್ದು. ಇದು, ರಹಸ್ಯವಾಗಿ ಕಾರ್ಯಾಚರಣೆ ನಡೆಸುವ ಹಡಗುಗಳು ಹಾಗೂ ಜಲಾಂತರ್ಗಾಮಿಗಳ ವಿರುದ್ಧದ ಕಾರ್ಯಾಚರಣೆಗೆ ಅಗತ್ಯವಿರುವ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ’ ಎಂದು ನೌಕಾಪಡೆ ಮೂಲಗಳು ಹೇಳಿವೆ.
ಪ್ರಸ್ತುತ ಬಳಕೆಯಲ್ಲಿರುವ ಸಿಡಿಮದ್ದುಗಳು, ಭೌತಿಕವಾಗಿ ಸ್ಪರ್ಶವಾದಾಗ ಸ್ಫೋಟಗೊಳ್ಳುತ್ತವೆ. ಎಂಐಜಿಎಂ ಅತ್ಯಾಧುನಿಕ ಸಂದೇದಕಗಳನ್ನು ಒಳಗೊಂಡಿದ್ದು, ಶತ್ರು ರಾಷ್ಟ್ರಗಳ ಯುದ್ಧನೌಕೆಗಳ ಚಲನಚಲನಗಳನ್ನು ಬಹುದೂರದಿಂದಲೇ ಗ್ರಹಿಸಿ, ಅವುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
ಶತ್ರು ದೇಶಗಳ ಯುದ್ಧನೌಕೆ/ಜಲಾಂತರ್ಗಾಮಿಗಳ ಪ್ರೊಪೆಲರ್‌ಗಳು, ಎಂಜಿನ್‌ಗಳಿಂದ ಹೊರಡುವ ಶಬ್ದ, ಹಡಗುಗಳು ‘ಎಂಐಜಿಎಂ’ಗಳ ಮೇಲೆ ಹಾದು ಹೋಗುವಾಗ, ನೀರಿನ ಒತ್ತಡದಲ್ಲಿ ಕಂಡುಬರುವ ಬದಲಾವಣೆಯನ್ನು ಸಂವೇದಕಗಳು ಪತ್ತೆ ಹಚ್ಚಿ, ಅವುಗಳನ್ನು ನಾಶಪಡಿಸಲು ನೆರವಾಗುತ್ತವೆ ಎಂದೂ ಮೂಲಗಳು ಹೇಳಿವೆ.
ವಿಶಾಖಪಟ್ಟಣದಲ್ಲಿರುವ ನೇವಲ್ ಸೈನ್ಸ್ ಅಂಡ್ ಟೆಕ್ನಾಲಜಿಕಲ್ ಲ್ಯಾಬೊರೇಟರಿಯು ಡಿಆರ್‌ಡಿಒ ಅಂಗಸಂಸ್ಥೆಗಳಾದ ಪುಣೆಯ ಹೈಎನರ್ಜಿ ಮಟಿರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ, ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ, ವಿಶಾಖಪಟ್ಟಣದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಹಾಗೂ ಹೈದರಾಬಾದ್‌ನ ಅಪೊಲೊ ಮೈಕ್ರೊಸಿಸ್ಟಮ್ಸ್ ಲಿಮಿಟೆಡ್ ಸಹಯೋಗದಲ್ಲಿ ‘ಎಂಐಜಿಎಂ’ಅನ್ನು ಅಭಿವೃದ್ಧಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.