ADVERTISEMENT

ಪೈಲಟ್‌ಗಳ ವ್ಯಕ್ತಿತ್ವದ ಬಗ್ಗೆ ಆಧಾರರಹಿತ ತೀರ್ಪು ಸಲ್ಲ: ಎಎಲ್‌ಪಿಎ

ಪಿಟಿಐ
Published 17 ಜುಲೈ 2025, 12:31 IST
Last Updated 17 ಜುಲೈ 2025, 12:31 IST
   

ನವದೆಹಲಿ: ಪ್ರಯಾಣಿಕರನ್ನು ಉಳಿಸಲು ಪೈಲಟ್‌ಗಳು ಸಾಧ್ಯವಿರುವ ಎಲ್ಲಾ ಪಯತ್ನಗಳನ್ನು ಮಾಡಿರುತ್ತಾರೆ. ಅವರು ಗೌರವಕ್ಕೆ ಅರ್ಹರು. ಆಧಾರ ರಹಿತವಾಗಿ ಅವರ ವ್ಯಕ್ತಿತ್ವದ ಬಗ್ಗೆ ತೀರ್ಪು ನೀಡುವುದು ಸರಿಯಲ್ಲ ಎಂದು ಭಾರತೀಯ ಏರ್‌ಲೈನ್ಸ್‌ ಪೈಲಟ್‌ಗಳ ಸಂಘ(ಎಎಲ್‌ಪಿಎ) ಹೇಳಿದೆ.

‘ಪೈಲಟ್‌ಗಳು ತರಬೇತಿ ಪಡೆದ ವೃತ್ತಿಪರರು. ತಮ್ಮೊಂದಿಗೆ ಪ್ರಯಾಣ ಮಾಡುವ ನೂರಾರು ಜೀವಗಳ ಬಗ್ಗೆ ಅವರಿಗೆ ಜವಾಬ್ದಾರಿ ಇರುತ್ತದೆ’ ಎಂದು ಹೇಳಿದೆ.

‘ವಿಮಾನದಲ್ಲಿದ್ದ ಪ್ರಯಾಣಿಕರ ಜೊತೆಗೆ ನೆಲದ ಮೇಲೆಯೂ ಯಾರಿಗೂ ಹಾನಿಯಾಗದಂತೆ ತಪ್ಪಿಸಲು ಕೊನೆಯುಸಿರಿರುವವರೆಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಅವರು ಮಾಡಿರುತ್ತಾರೆ’ ಎಂದಿದೆ.

ADVERTISEMENT

ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ 171 ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಸಂಕೀರ್ಣದ ಮೇಲೆ ಅಪ್ಪಳಿಸಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಜನರು, ಕಟ್ಟಡದಲ್ಲಿದ್ದ 19 ಮಂದಿ ಸೇರಿ 260 ಜನರು ಮೃತಪಟ್ಟಿದ್ದರು.

ಇತ್ತೀಚೆಗೆ ವಿಮಾನ ದುರಂತದ ಪ್ರಾಥಮಿಕ ವರದಿ ಬಿಡುಗಡೆ ಮಾಡಿದ್ದ ವಿಮಾನ ಅಪಘಾತಗಳ ತನಿಖಾ ಬ್ಯುರೋ, ಎಂಜಿನ್‌ಗಳಿಗೆ ಇಂಧನ ಪೂರೈಕೆಯಾಗದ್ದರಿಂದ ದುರಂತ ಸಂಭವಿಸಿದೆ ಎಂದು ಹೇಳಿತ್ತು. ಎಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್‌ಗಳು ಆಫ್‌ ಆಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಆದರೆ, ವಿಮಾನದ ಪತನಕ್ಕೆ ತಾಂತ್ರಿಕ ದೋಷ ಕಾರಣವೇ? ಅಥವಾ ಪೈಲಟ್‌ಗಳ ತಪ್ಪಿನಿಂದ ನಡೆದಿದೆಯಾ ಎಂಬ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ.

ವರದಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದ್ದ ಎಎಲ್‌ಪಿಎ, ‘ಪೈಲಟ್‌ಗಳೇ ವಿಮಾನ ಪತನ ಮಾಡಿದ್ದಾರೆ(ಪೈಲಟ್‌ ಸೂಸೈಡ್‌) ಎಂಬಂತ ವಾದವನ್ನು ಮುಂದಿಡಲಾಗುತ್ತಿದೆ. ಇದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಪಾರದರ್ಶಕವಾಗಿ ತನಿಖೆ ನಡೆಸುವಂತೆಯೂ ಒತ್ತಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.