ADVERTISEMENT

ರೈಲಿನಲ್ಲಿ ಬೆಂಕಿ ವದಂತಿ: ಇಳಿದು ಪಕ್ಕದ ಹಳಿಗೆ ಹೋದವರ ಮೇಲೆ ಹರಿದ ಎಕ್ಸ್‌ಪ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2025, 12:44 IST
Last Updated 22 ಜನವರಿ 2025, 12:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜಲಗಾಂವ್‌ (ಮಹಾರಾಷ್ಟ್ರ): ಬೋಗಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ಲಖನೌ–ಮುಂಬೈ ಪುಷ್ಪಕ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವರು ರೈಲಿನಿಂದ ಹಾರಿ ಓಡತೊಡಗಿದರು. ಇದೇ ವೇಳೆಗೆ ಮತ್ತೊಂದು ಹಳಿಯಲ್ಲಿ ಬೆಂಗಳೂರಿನಿಂದ ದೆಹಲಿಗೆ ಸಾಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿಗೆ ಸಿಕ್ಕಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ಬುಧವಾರ ಸಂಜೆ 5ರ ವೇಳೆಗೆ ಈ ಅವಘಡ ಸಂಭವಿಸಿದೆ. ‘ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಸಾವಿನ ಸಂಖ್ಯೆ 40ಕ್ಕಿಂತ ಅಧಿಕಗೊಳ್ಳುವ ಸಂಭವವಿದೆ’ ಎಂದು ಜಲಗಾಂವ್‌ನವರೇ ಆದ ಕೇಂದ್ರ ಸಚಿವೆ ರಕ್ಷಾ ಖಡಸೆ ಹೇಳಿದರು.

ADVERTISEMENT

‘ಮುಂಬೈನಿಂದ 400 ಕಿ.ಮೀ. ದೂರದ ಪಚೋರಾ ರೈಲು ನಿಲ್ದಾಣದ ಬಳಿ ಪುಷ್ಪಕ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿತ್ತು. ಈ ವೇಳೆ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿರುವ ವದಂತಿ ಹಬ್ಬಿದೆ. ತಕ್ಷಣವೇ ಯಾರೋ ಒಬ್ಬರು ರೈಲಿನ ಚೈನ್‌ ಎಳೆದಿದ್ದಾರೆ’ ಎಂದು ಕೇಂದ್ರೀಯ ರೈಲ್ವೆ ವಿಭಾಗದ ಅಧಿಕಾರಿ ಮಾಹಿತಿ ನೀಡಿದರು. ಸಾವಿನ ಸಂಖ್ಯೆಯ ಕುರಿತು ರೈಲ್ವೆ ಅಧಿಕಾರಿಗಳು ನಿಖರ ಮಾಹಿತಿ ನೀಡಿಲ್ಲ.

‘12 ಮೃತದೇಹಗಳನ್ನು ಹತ್ತಿರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. 6–7 ಮಂದಿಗೆ ಗಾಯಳಾಗಿವೆ. ಗಾಯಗಳು ಗಂಭೀರ ಸ್ವರೂಪದ್ದಲ್ಲ. ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪೊಲೀಸ್‌ ಮಹಾನಿರ್ದೇಶಕ (ವಿಶೇಷ) ದತ್ತಾತ್ರೇಯ ಕರಳೆ ಹೇಳಿದರು. 

ಘಟನಾ ಸ್ಥಳದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಲ್ಲಲ್ಲಿ ಮೃತದೇಹಗಳು ಬಿದ್ದಿರುವ, ದೇಹದ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿರುವ ದೃಶ್ಯಗಳು ವಿಡಿಯೊಗಳಲ್ಲಿವೆ. ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಎರಡೂ ರೈಲುಗಳು ತಮ್ಮ ಸಂಚಾರವನ್ನು ಪುನರಾರಂಭಿಸಿದವು.

ಆಗಿದ್ದೇನು?
‘ಪುಷ್ಪಕ್‌ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯೊಂದರ ಆಕ್ಸೆಲ್‌ ತೀವ್ರವಾಗಿ ಬಿಸಿಯಾಗಿತ್ತು. ಆದ್ದರಿಂದ ಆಕ್ಸೆಲ್‌ನಲ್ಲಿ ಕಿಡಿ ಹೊತ್ತಿಕೊಂಡಿತು. ಇದರಿಂದ ಹೊಗೆ ಎದ್ದಿತು. ಹೊಗೆ ನೋಡುತ್ತಿದ್ದಂತೆಯೇ ಜನರು ಭೀತರಾದರು. ಯಾರೋ ಒಬ್ಬರು ರೈಲಿನ ಚೈನ್‌ ಎಳೆದರು. ಕೆಲವರು ರೈಲಿನಿಂದ ಹಾರಿ ಪಕ್ಕದ ಹಳಿಯ ಮೇಲಿದ್ದರು. ಇದೇ ವೇಳೆ ಪುಷ್ಪಕ್‌ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಸಿಕ್ಕಿ ಹಲವರು ಮೃತಪಟ್ಟರು’ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ 8 ಆಂಬುಲೆನ್ಸ್‌ ಕಳುಹಿಸಲಾಗಿದೆ. ಗಾಯಾಳುಗಳ ಚಿಕಿತ್ಸೆಗೆ ತಯಾರಾಗಿರಿ ಎಂದು ಸುತ್ತಮುತ್ತಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.
–ದೇವೇಂದ್ರ ಘಡಣವೀಸ್‌, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.