ADVERTISEMENT

ಖರೀದಿಗೆ ಜನರ ಹಿಂಜರಿತ: ಎನ್‌ಎಸ್‌ಒ ವರದಿ ಸೋರಿಕೆ

ನಾಲ್ಕು ದಶಕ ಹಿಂದಿನ ಮಟ್ಟಕ್ಕೆ ಕುಸಿದ ಗ್ರಾಹಕ ಬೇಡಿಕೆ

ಏಜೆನ್ಸೀಸ್
Published 15 ನವೆಂಬರ್ 2019, 23:03 IST
Last Updated 15 ನವೆಂಬರ್ 2019, 23:03 IST
   

ಮುಂಬೈ: ದೇಶದ ಜನರ ಖರೀದಿ ಪ್ರಮಾಣವು ನಾಲ್ಕು ದಶಕದಲ್ಲೇ ಮೊದಲ ಬಾರಿ ಕುಸಿದಿದೆ ಎಂದು ‘ಬ್ಯುಸಿನೆಸ್ ಸ್ಟಾಂಡರ್ಡ್‌’ ಪತ್ರಿಕೆ ವರದಿ ಮಾಡಿದೆ.

ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯು (ಎನ್‌ಎಸ್‌ಒ)ಗ್ರಾಹಕರ ಖರೀದಿಗೆ ಸಂಬಂಧಿಸಿ ಸಿದ್ಧಪಡಿಸಿದ ಸಮೀಕ್ಷಾ ವರದಿ ಸೋರಿಕೆಯಾಗಿದೆ. ಅದನ್ನು ಆಧರಿಸಿ ಪತ್ರಿಕೆ ಈ ವರದಿ ಪ್ರಕಟಿಸಿದೆ.

‘2011–12ನೇ ಸಾಲಿಗೆ ಹೋಲಿಸಿದರೆ, 2017ರ ಜುಲೈ–2018ರ ಜೂನ್‌ ನಡುವೆಗ್ರಾಮೀಣ ಭಾರತದ ಜನರ ಖರೀದಿಸುವ ಪ್ರಮಾಣ ಶೇ 8.8ರಷ್ಟು ಕುಸಿದಿದೆ ಎಂದು ಎನ್‌ಎಸ್‌ಒ ವರದಿಯಲ್ಲಿ ಹೇಳಲಾಗಿದೆ’ ಎಂದು ಪತ್ರಿಕಾ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಭಾರತದಲ್ಲಿ ಮೂರನೇ ಒಂದರಷ್ಟು ಜನರು ದೇಶದ ಗ್ರಾಮೀಣ ಪ್ರದೇಶಗಳಲ್ಲೇ ಇದ್ದಾರೆ. ಆದರೆ ಈ ಭಾಗದಲ್ಲಿ ಜನರು ಆಹಾರ, ಶಿಕ್ಷಣ, ಬಟ್ಟೆ ಸೇರಿದಂತೆ ಅತ್ಯಗತ್ಯ ವಸ್ತುಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಿದ್ದಾರೆ’ ಎಂದು ಎನ್‌ಎಸ್‌ಒ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ನಗರದ ಜನರ ಖರೀದಿ ಪ್ರಮಾಣವು ಶೇ 2ರಷ್ಟು ಏರಿಕೆಯಾಗಿದೆ. ಆದರೆ, ಒಟ್ಟಾಗಿ ಜನರ ಖರೀದಿ ಪ್ರಮಾಣವು ಶೇ 3.7ರಷ್ಟು ಕುಸಿದಿದೆ ಎಂದು ‘ಬ್ಯುಸಿನೆಸ್ ಸ್ಟಾಡಂರ್ಡ್‌’ ಹೇಳಿದೆ.

ಹಿಂಜರಿತದತ್ತ ಸಾಗುತ್ತಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಒದ್ದಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇದು ಅತ್ಯಂತ ಕೆಟ್ಟ ಸುದ್ದಿ ಎಂದು ಎಎಫ್‌ಪಿ ವರದಿ ಮಾಡಿದೆ.

ವರದಿ ಬಿಡುಗಡೆ ಇಲ್ಲ: ಸರ್ಕಾರ
‘2017–18ನೇ ಸಾಲಿನ ಗ್ರಾಹಕ ವೆಚ್ಚ ಸಮೀಕ್ಷೆಯ ದತ್ತಾಂಶಗಳಲ್ಲಿ ಗುಣಮಟ್ಟದ ಸಮಸ್ಯೆ ಇದೆ. ಹೀಗಾಗಿ ಅದನ್ನು ಬಿಡುಗಡೆ ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ’ ಎಂದು ಸಾಂಖ್ಯಿಕ ಸಚಿವಾಲಯ ಹೇಳಿದೆ.

‘ದತ್ತಾಂಶ ಸಂಗ್ರಹ ಮತ್ತು ವಿಶ್ಲೇಷಣೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿದ ನಂತರ 2020–21 ಮತ್ತು 2021–22ನೇ ಸಾಲಿನಲ್ಲಿ ಸಮೀಕ್ಷೆ ನಡೆಸುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಮೋದಿನಾಮಿಕ್ಸ್ ನಾರುತ್ತಿದೆ’
ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಯು ಕೊಳೆತು ನಾರುತ್ತಿದೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಸರ್ಕಾರದ ಅಪ್ರಕಟಿತ ವರದಿಯನ್ನು ಆಧರಿಸಿ ವರದಿ ಪ್ರಕಟಿಸಿರುವ ‘ಬ್ಯುಸಿನೆಸ್ ಸ್ಟಾಡಂರ್ಡ್‌’ ಪತ್ರಿಕೆಯ ಚಿತ್ರವನ್ನು ರಾಹುಲ್ ಟ್ವೀಟ್ ಮಾಡಿದ್ದಾರೆ.ಪತ್ರಿಕೆಯ ಮುಖಪುಟದಲ್ಲಿರುವ ವರದಿಯ ಚಿತ್ರವನ್ನು ಅವರು ಪ್ರಕಟಿಸಿದ್ದಾರೆ. ಜತೆಗೆ, ‘ಮೋದಿನಾಮಿಕ್ಸ್‌ (ಮೋದಿಯ ಅರ್ಥಶಾಸ್ತ್ರ) ಎಷ್ಟು ಕೊಳೆತು ನಾರುತ್ತಿದೆಯೆಂದರೆ, ಸರ್ಕಾರವು ತನ್ನದೇ ವರದಿಗಳನ್ನು ಮುಚ್ಚಿಡುತ್ತಿದೆ’ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.

ವರದಿ ಸೋರಿಕೆ
2017–18ನೇ ಸಾಲಿಗೆ ಸಂಬಂಧಿಸಿದಂತೆ ಎನ್‌ಎಸ್‌ಒ ಸಿದ್ಧಪಡಿಸಿರುವ, ‘ಕೌಟುಂಬಿಕ ಖರೀದಿ–ವೆಚ್ಚ’ ಸಮೀಕ್ಷಾ ವರದಿಯಲ್ಲಿ ಈ ಮಾಹಿತಿ ಇದೆ ಎಂದು ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ

ಈ ವರದಿಯನ್ನು ಸರ್ಕಾರವು ಈವರೆಗೆ ಪ್ರಕಟಿಸಿಲ್ಲ. ಆದರೆ, ಪತ್ರಿಕೆಯು ತನಗೆ ಈ ವರದಿ ಲಭ್ಯವಾಗಿದೆ ಎಂದು ಹೇಳಿಕೊಂಡಿದೆ

‘ಇದೇ ಜೂನ್‌ನಲ್ಲಿ ಈ ವರದಿ ಬಿಡುಗಡೆಯಾಗಬೇಕಿತ್ತು. ಆದರೆ, ಸಮೀಕ್ಷಾ ವರದಿಯು ಪ್ರತಿಕೂಲವಾದ ಅಂಶಗಳನ್ನು ಒಳಗೊಂಡಿತ್ತು. ಹೀಗಾಗಿ ಅದನ್ನು ಪ್ರಕಟಿಸಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಮದುವೆ ಆಗುತ್ತಿವೆ, ಆರ್ಥಿಕತೆ ಚೆನ್ನಾಗೇ ಇದೆ’
‘ವಿಮಾನ ನಿಲ್ದಾಣಗಳು ಭರ್ತಿಯಾಗುತ್ತಿವೆ, ರೈಲುಗಳು ಭರ್ತಿಯಾಗುತ್ತಿವೆ, ಜನರು ಮದುವೆಯಾಗುತ್ತಿದ್ದಾರೆ. ಆದರೆ, ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶದಿಂದ ಕೆಲವರು ಆರ್ಥಿಕತೆ ಕುಂಟುತ್ತಿದೆ ಎನ್ನುತ್ತಿದ್ದಾರೆ ಅಷ್ಟೆ’ ಎಂದುರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಹೇಳಿದ್ದಾರೆ.

*
ಸದ್ಯದ ಆರ್ಥಿಕ ಮಂದಗತಿಯು ಬಿಡಿಬಿಡಿ ಘಟನೆಗಳ ಪರಿಣಾಮವಾಗಿದ್ದು, ದೀರ್ಘ ಸಮಯದವರೆಗೆ ಮುಂದುವರಿಯುವುದಿಲ್ಲ
-ಎನ್‌. ಕೆ. ಸಿಂಗ್‌, ಹಣಕಾಸು ಆಯೋಗದ ಅಧ್ಯಕ್ಷ

*
ವಿಮಾನ ನಿಲ್ದಾಣಗಳು, ರೈಲುಗಳು ಭರ್ತಿಯಾಗುತ್ತಿವೆ, ಜನರು ಮದುವೆಯಾಗುತ್ತಿದ್ದಾರೆ. ಅಂದರೆ ಆರ್ಥಿಕತೆ ಚೆನ್ನಾಗಿಯೇ ಇದೆ ಎಂದರ್ಥ.
-ಸುರೇಶ್‌ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.