ADVERTISEMENT

PV Web Exclusive | ಚೀನಾ ಗುಮ್ಮನಿಗೆ ಭಾರತೀಯ ಸೇನೆಯ ತಿರುಮಂತ್ರ

ಸ್ಥಳೀಯ ಸೇನಾ ನಾಯಕತ್ವಕ್ಕೆ ಹೆಚ್ಚು ಸ್ವಾತಂತ್ರ್ಯ

ಘನಶ್ಯಾಮ ಡಿ.ಎಂ.
Published 12 ಸೆಪ್ಟೆಂಬರ್ 2020, 4:53 IST
Last Updated 12 ಸೆಪ್ಟೆಂಬರ್ 2020, 4:53 IST
ಚೀನಾ ಗಡಿ ಸಂಪರ್ಕಿಸುವ ಲೇಹ್ ಹೆದ್ದಾರಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ ಯೋಧರ ಕಾವಲು (ಎಎಫ್‌ಪಿ ಚಿತ್ರ)
ಚೀನಾ ಗಡಿ ಸಂಪರ್ಕಿಸುವ ಲೇಹ್ ಹೆದ್ದಾರಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ ಯೋಧರ ಕಾವಲು (ಎಎಫ್‌ಪಿ ಚಿತ್ರ)   

ಚೀನಾ ಗಡಿಯಲ್ಲಿ ಗಡಿಬಿಡಿ ಇನ್ನೂ ತಣಿದಿಲ್ಲ, ಸದ್ಯದ ಮಟ್ಟಿಗೆ ತಣಿಯುವಂತೆಯೂ ಇಲ್ಲ. ರಷ್ಯಾ, ಕೊರಿಯಾ, ಮಂಗೋಲಿಯಾ ಸೇರಿದಂತೆ ಹಲವು ದೇಶಗಳೊಂದಿಗೆ ಗಡಿ ವಿವಾದಗಳನ್ನು ಹೊಂದಿರುವ ಚೀನಾಗೆ ಭಾರತದೊಂದಿಗೆ ತಂಟೆ ತೆಗೆಯಲು ಕೇವಲ ಭೂಮಿಯ ಆಸೆಯೊಂದೇ ಕಾರಣವಲ್ಲ. ಆರ್ಥಿಕವಾಗಿ, ಸಾಮರಿಕವಾಗಿ ಚೀನಾಗೆ ಸರಿಸಾಟಿಯಾಗಬಲ್ಲ ಭಾರತದಿಂದ ಇಂದಲ್ಲ ನಾಳೆ ತನಗೆ ಸವಾಲು ಎದುರಾಗಬಹುದು ಎಂಬುದನ್ನು ಮನಗಂಡಿರುವ ಚೀನಾಗೆ ಸಂಘರ್ಷವನ್ನು ತಕ್ಷಣಕ್ಕೆ ತಣಿಸಿಕೊಳ್ಳುವುದು ಬೇಕಾಗಿಯೂ ಇಲ್ಲ.

ಗಡಿ ಸಂಘರ್ಷವನ್ನು ಸಾಧ್ಯವಾದಷ್ಟೂ ದೀರ್ಘಕಾಲ ಬೆಳೆಸಬೇಕು, ಭಾರತದ ರಕ್ಷಣಾ ಬಜೆಟ್‌ನಲ್ಲಿ ಗಣನೀಯ ಹೆಚ್ಚಳವಾಗುವಂತೆ ಮಾಡಿ, ಅದರ ಆರ್ಥಿಕ ಪ್ರಗತಿಯ ವೇಗಕ್ಕೆ ಕಡಿವಾಣ ಹಾಕಬೇಕು ಎಂಬುದು ಚೀನಾದ ಈವರೆಗಿನ ಬಹುತೇಕ ನಡೆಗಳ ಆಂತರ್ಯ.

ಮೇಲ್ನೋಟಕ್ಕೆ ಗಡಿ ಸಂಘರ್ಷದಂತೆ ಕಾಣಿಸುವ ಲಡಾಖ್‌ ತುಡುಗನ್ನು ಚೀನಾ ಏಕಾಏಕಿ ಆರಂಭಿಸಿದ್ದಲ್ಲ. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಚೀನಾ ಮಾಡಿಕೊಂಡಿತ್ತು.ಸಾಕಷ್ಟು ದೇಶಗಳೊಂದಿಗೆ ತಂಟೆ ತೆಗೆದು, ತನ್ನ ಸಾರ್ವಭೌಮತೆಯ ರಕ್ಷಣೆಗಾಗಿ ಮಿಲಿಟರಿ ಬಲ ಪ್ರಯೋಗಕ್ಕೆ ಮುಂದಾದ ದೇಶಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ತಾನು ಮಾತ್ರ ಮಹಾನ್ ಸಭ್ಯಸ್ಥನಂತೆ ನಿಲ್ಲುವುದು ಚೀನಾ ರೂಢಿಸಿಕೊಂಡಿರುವ ತಂತ್ರ. ರಾಜತಾಂತ್ರಿಕ ಸಂಬಂಧಗಳ ಮುಸುಕಿನಲ್ಲಿ ಮಿಲಿಟರಿ ಕೋರೆಹಲ್ಲು ಪ್ರದರ್ಶಿಸಿಯೇ ಹಲವು ದೇಶಗಳೊಂದಿಗೆ ಇಂಥ ವಿವಾದಗಳನ್ನು ಚೀನಾ ತನ್ನ ಅನುಕೂಲಕ್ಕೆ ತಕ್ಕಂತೆ ಇತ್ಯರ್ಥಗೊಳಿಸಿಕೊಂಡಿರುವುದು ಈಗ ಇತಿಹಾಸ.

ADVERTISEMENT

1962ರ ಯುದ್ಧದ ನಂತರ ಬಹುಕಾಲ ಎರಡೂ ದೇಶಗಳ ಸರ್ಕಾರಗಳು ಮತ್ತು ಬುದ್ಧಿವಂತ ರಾಜತಾಂತ್ರಿಕರು ಕಷ್ಟಪಟ್ಟು ಹೆಣೆದಿದ್ದ ಸಂಬಂಧಗಳ ಸರಪಣಿ ಜೂನ್ 15-16 ಕಾಳರಾತ್ರಿಯಲ್ಲಿ ಚೆಲ್ಲಿದ ಎರಡೂ ದೇಶಗಳ ಯೋಧರ ನೆತ್ತರಿನಿಂದ ತುಂಡಾಯಿತು. ಈ ಸಂಘರ್ಷವನ್ನು ಚೀನಾ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೂ ಇಲ್ಲ, ತನ್ನ ಕಡೆ ಸತ್ತವರ ಸಂಖ್ಯೆಯನ್ನು ಬಹಿರಂಗಪಡಿಸಲೂ ಇಲ್ಲ. ಆದರೆ ಭಾರತದ ಮಿಲಿಟರಿಯ ಮುಂದಿನ ನಡೆಗಳನ್ನು ಈ ಸಂಘರ್ಷ ನಿರ್ಣಾಯಕವಾಗಿ ಬದಲಿಸಿತು. ಅದರಿಂದ ಕಲಿತ ಪಾಠಗಳನ್ನು ಸೈನಿಕ ಕಾರ್ಯಪದ್ಧತಿಯಲ್ಲಿ ಚುರುಕಾಗಿ ಅನುಷ್ಠಾನಕ್ಕೆ ತಂದ ಭಾರತ ಇದೀಗ ಮತ್ತೊಂದು ಅಂಥದ್ದೇ ಸಂಭಾವ್ಯ ಸಂಘರ್ಷವನ್ನು ತಡೆಯುವಲ್ಲಿ ಯಶಸ್ವಿಯಾದುದಲ್ಲದೆ, ಚೀನಾ ಸೇನೆಯ ವಿರುದ್ಧ ಮೇಲುಗೈ ಸಹ ಸಾಧಿಸಿತು.

ಹೊಸ ನಿಯಮಗಳು

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾ ಸೇನೆಯನ್ನು ಎದುರಿಸಲು ಈ ಹಿಂದೆ ಅಳವಡಿಸಿಕೊಂಡಿದ್ದ ನಿಯಮಗಳು ತೊಡಕಾಗಬಲ್ಲವು ಎಂಬುದನ್ನು ಅರಿತ ಭಾರತೀಯ ಸೇನೆ, ತನ್ನ ಸ್ಥಳೀಯ ಕಮಾಂಡರ್‌ಗಳಿಗೆ ನಿರ್ಣಾಯಕ ಸ್ವಾತಂತ್ರ್ಯಕೊಟ್ಟಿದೆ. ದೆಹಲಿಯಿಂದ ಸೇನಾ ಮುಖ್ಯಸ್ಥರೂ ಸೇರಿದಂತೆ ಮುಖ್ಯ ಕಚೇರಿಯ ಹಿರಿಯ ಅಧಿಕಾರಿಗಳು ನಿಯಮಿತ ಸಮಾಲೋಚನೆಗಳನ್ನು ನಡೆಸುತ್ತಾರಾದರೂ ತುರ್ತು ಪರಿಸ್ಥಿತಿಯಲ್ಲಿ ಆಯುಧ ಬಳಕೆಯೂ ಸೇರಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ಥಳೀಯ ಕಮಾಂಡರ್‌ಗಳು ದೆಹಲಿ ನಾಯಕತ್ವದ ಕಡೆಗೆ ನೋಡಬೇಕಿಲ್ಲ.

1962ರ ಚೀನಾ ಯುದ್ಧದಲ್ಲಿ ಭಾರತೀಯ ಸೇನೆಯ ಸೋಲಿಗೆ ಸ್ಥಳೀಯ ಕಮಾಂಡರ್‌ಗಳಿಗೆ ಸ್ವಾತಂತ್ರ್ಯನೀಡದಿದ್ದುದು ಒಂದು ಪ್ರಮುಖ ಕಾರಣವಾಗಿತ್ತು. ಆದರೆ ಕಳೆದವಾರ ಗಡಿಯಲ್ಲಿ (ಪಾಂಗೊಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ) ನಡೆದ ಯುದ್ಧವಲ್ಲದ ಯುದ್ಧದಲ್ಲಿ ಚುರುಕು ಮನಸ್ಥಿತಿಯ ಸ್ಥಳೀಯ ಕಮಾಂಡರ್‌ ತೆಗೆದುಕೊಂಡ ಬುದ್ಧಿವಂತ ನಿರ್ಧಾರವೊಂದು ಸಂಭಾವ್ಯ ಸಂಘರ್ಷ ತಪ್ಪಿಸಿದ್ದಲ್ಲದೇ, ಭಾರತೀಯ ಸೇನೆಯ ಮೇಲುಗೈ ಕಾಪಾಡಿತು. ಕಾಲ ಮತ್ತು ಸೇನೆ ಎಷ್ಟು ಬದಲಾಗಿದೆಯಲ್ಲವೇ?

ಯುದ್ಧಗಳು ಕೇವಲ ಯುದ್ಧಭೂಮಿಯಲ್ಲಿ ಮಾತ್ರವೇ ನಡೆಯುವುದಿಲ್ಲ. ಯುದ್ಧಭೂಮಿಯಲ್ಲಿ ಯುದ್ಧ ಕಾರ್ಯಾನುಷ್ಠಾನಗೊಳ್ಳುವ ಮೊದಲು ಕಮಾಂಡರ್‌ಗಳ ಮನಸ್ಸಿನಲ್ಲಿ ಅದು ನಡೆದಿರುತ್ತೆ. ಯಾವ ಕಮಾಂಡರ್‌ಗೆ ತನ್ನ ಸಂಪನ್ಮೂಲಗಳು, ತನ್ನ ಯೋಧರ ಕೆಚ್ಚು-ರೊಚ್ಚು-ಸಾಮರ್ಥ್ಯ ಮತ್ತು ಎದುರಾಳಿಗಳ ದೌರ್ಬಲ್ಯಗಳ ನಿಖರ ಅರಿವಿರುತ್ತದೆಯೋ ಅಂಥವರು ಮಾತ್ರ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಸೇನೆಗೆಜಯ ದಕ್ಕಿಸಿಕೊಡಬಲ್ಲರು.

ದಕ್ಷಿಣ ದಂಡೆಯಲ್ಲಿ ಆದದ್ದೇನು?

ಸಮರ ತಂತ್ರದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದ ಗಿರಿಶಿಖರಗಳನ್ನು ತನ್ನ ಸುಪರ್ದಿಯಲ್ಲಿರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಭಾರೀ ಸಂಖ್ಯೆಯ ಚೀನಾದ ಸೈನಿಕ ತುಕಡಿಗಳು ಆಗಸ್ಟ್ 29ರಂದು (?) ಭಾರತದ ಗಡಿಯತ್ತ ಮುಂದೊತ್ತಲು ಆರಂಭಿಸಿದವು. ಗುಪ್ತಚರ ವರದಿಗಳ ಮೂಲಕ ಇಂಥದ್ದೊಂದು ನಡೆಯನ್ನು ಮುಂದಾಗಿ ಊಹಿಸಿದ್ದ ಭಾರತೀಯ ಸೇನೆಯು ಚೀನಾ ವಶಪಡಿಸಿಕೊಳ್ಳುವ ಸಾಧ್ಯತೆಗಳಿದ್ದ ಗಿರಿಶಿಖರಗಳನ್ನು ತಾನು ಮೊದಲೇ ವಶಪಡಿಸಿಕೊಂಡು ಠಾಣೆಗಳನ್ನು ಸ್ಥಾಪಿಸಿತ್ತು.

ಚೀನಾ ಸೇನೆಯ ಕದಲಿಕೆ ವರದಿಯಾದ ತಕ್ಷಣವೇ ಚುರುಕಾದ ಭಾರತೀಯ ಸೇನೆಯು ತಾನು ಇಂತಲ್ಲಿ ಇರುವುದಾಗಿ ಸೈನಿಕ ಸಂಕೇತಗಳ (ಟ್ಯಾಕ್ಟಿಕಲ್ ಸಿಗ್ನಲಿಂಗ್) ಮೂಲಕ ಸ್ಪಷ್ಟವಾಗಿ ಸಾರಿ ಹೇಳಿತು. ಈ ಸಂಕೇತಗಳಲ್ಲಿ ಪರೋಕ್ಷವಾಗಿ ಎಚ್ಚರಿಕೆಯ ಮಾರ್ಮಿಕತೆಯೂ ಇತ್ತು. ಭಾರತೀಯ ಸೈನಿಕರು ಮತ್ತು ಪರ್ವತಗಳ ಮೇಲ್ಭಾಗದಲ್ಲಿ ಮತ್ತು ಚೀನಾ ಸೇನೆ ಪರ್ವತಗಳ ಕೆಳಭಾಗದಲ್ಲಿ ಇದ್ದ ಕಾರಣ ಒಂದು ವೇಳೆ ಸಂಘರ್ಷ ನಡೆದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂದು ಊಹಿಸುವುದೂ ಕಷ್ಟವಾಗಿರಲಿಲ್ಲ.

ಸಂಖ್ಯೆಯ ದೃಷ್ಟಿಯಿಂದ ಚೀನಾದ ಜಮಾವಣೆ ಗಣನೀಯ ಪ್ರಮಾಣದಲ್ಲಿತ್ತು. ಯುದ್ಧೋಪಕರಣ ಮತ್ತು ಮಿಲಿಟರಿ ವಾಹನಗಳೂ ಅವರ ಸೈನಿಕರ ಸಂಖ್ಯೆ ಅನುಪಾತಕ್ಕೆ ಅನುಗುಣವಾಗಿಯೇ ಇತ್ತು. ಆದರೆ ಹಠಾತ್ ಎದುರಾದ ಎಚ್ಚರಿಕೆಯಿಂದ ಗೊಂದಲಕ್ಕೊಳಗಾಗಿ ಚೀನಾ ಸೇನೆ ಹಿಮ್ಮೆಟ್ಟಿತು. ಅಷ್ಟರಮಟ್ಟಿಗೆ ಇದು ಭಾರತೀಯ ಸೇನೆಯ ಜಯ.ಗಡಿ ಸಂಘರ್ಷ, ಯುದ್ಧಗಳಲ್ಲಿ ಮಾಹಿತಿ ಮತ್ತು ಲೆಕ್ಕಾಚಾರಗಳೂ ಸಹ ಬಂದೂಕಿನಷ್ಟೇ ಮುಖ್ಯ ಅಸ್ತ್ರ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿತು.

‘ಭಾರತದೊಂದಿಗೆ ಸಂಘರ್ಷವೆಂದರೆ ಹುಡುಗಾಟದ ಮಾತಲ್ಲ, ಅವರೂ ಎಂಥದ್ದೇ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂಬುದು ಈ ಸಂಕೇತದ ಮೂಲಕ ಚೀನಾಗೆ ಮನವರಿಕೆಯಾಯಿತು ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ಜಾಲತಾಣ ಸೆ.4ರಂದು ವರದಿ ಮಾಡಿತ್ತು.

ಸಂಘರ್ಷ ನಿರ್ವಹಣೆ ನಿಯಮಗಳು ಬದಲು

ಬಿಹಾರ್‌ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಸಂತೋಷ್ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾದ ಗಾಲ್ವಾನ್ ಕಣಿವೆಯ ಸಂಘರ್ಷವನ್ನು ಒಮ್ಮೆ ನೆನಪಿಸಿಕೊಳ್ಳಿ. ಭಾರತೀಯ ಸೇನೆಯು ಚೀನಾಗೆ ಸಂಬಂಧಿಸಿದಂತೆ ಅನುಸರಿಸಿದ್ದ ನಿಯಮಾವಳಿಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಲು ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಕಾರಣವಾದ ಮಹತ್ವದ ಬೆಳವಣಿಗೆ ಅದು.

ಭಾರತಕ್ಕೆ ಸೇರಿದ ನೆಲದಲ್ಲಿದ್ದ ಚೀನಾ ಗಡಿ ನಿಗಾವಣಾ ಠಾಣೆ ತೆರವುಗೊಳಿಸಲು ಹೋಗಿದ್ದವರ ಮೇಲೆ ಚೀನಾ ಸೈನಿಕರು ನಡೆಸಿದ ಅನಾಗರಿಕ ದಾಳಿಈ ಸಂಘರ್ಷದ ಮೂಲ ಕಾರಣ. ಜೂನ್ 15ರಂದು ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಸೇನೆ ಮೊಳೆಹೊಡೆದ ಲಾಠಿಗಳು, ಕಬ್ಬಿಣದ ರಾಡ್‌ಗಳನ್ನು ಬಳಸಿತ್ತು.

ಹೊಸ ನಿಯಮಗಳು

ಗಲ್ವಾನ್ ಸಂಘರ್ಷದ ನಂತರ ಜಾರಿಯಾದ ಹೊಸ ನಿಯಮಗಳ ಪ್ರಕಾರ ತಮ್ಮ ಸುಪರ್ದಿಯಲ್ಲಿರುವ ಯಾವುದೇ ಉಪಕರಣ (ಆಯುಧ ?) ಅಥವಾ ವಸ್ತುವನ್ನು ಇದೀಗ ಸ್ಥಳೀಯ ಕಮಾಂಡರ್‌ಗಳು ಪರಿಸ್ಥಿತಿಯ ಅಗತ್ಯಕ್ಕೆ ತಕ್ಕಂತೆ ಬಳಸಲು ಅನುಮತಿ ನೀಡಲಾಗಿದೆ.

ವಾಸ್ತವ ನಿಯಂತ್ರಣ ರೇಖೆಯ 2 ಕಿ.ಮೀ. ಫಾಸಲೆಯಲ್ಲಿ ಸ್ಫೋಟಕಗಳನ್ನು ಬಳಸುವಂತಿಲ್ಲ ಎಂಬ 1996ರ ಒಪ್ಪಂದದ ಆಶಯದಂತೆ ಈವರೆಗೆ ಭಾರತೀಯ ಸೇನೆ ನಡೆದುಕೊಳ್ಳುತ್ತಿತ್ತು. ಚೀನಾ ಗಡಿ ಗಸ್ತಿಗೆ ಹೋಗುತ್ತಿದ್ದ ಸೈನಿಕರು ಗುಂಡು ತುಂಬಿದ ಬಂದೂಕುಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿರಲಿಲ್ಲ.ಆದರೆ ಈಗ ಮಾತ್ರ ಪರಿಸ್ಥಿತಿ ಮೊದಲಿನಂತಿಲ್ಲ.

ಕಳೆದ ವಾರ ಗಡಿಯಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ ಭಾರತೀಯ ಸೇನೆಯು ಚೀನಾ ಗಡಿಯಲ್ಲಿ ಪರಿಸ್ಥಿತಿತೆ ತಕ್ಕಂತೆ ನಿಯಮಗಳನ್ನು ಪರಿಷ್ಕರಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಈ ಕುರಿತು ಸೇನೆಯ ಪ್ರತಿಕ್ರಿಯೆ ಪಡೆಯಲು ಕೆಲ ರಾಷ್ಟ್ರೀಯ ಮಾಧ್ಯಮಗಳ ವರದಿಗಾರರು ಪ್ರಯತ್ನಿಸಿದರು. ಈ ಸಂದರ್ಭ ಸೇನೆಯ ಉನ್ನತ ಮೂಲಗಳು ನಿಯಮ ಪರಿಷ್ಕರಣೆ ವಿಚಾರವನ್ನು ಸ್ಪಷ್ಟವಾಗಿ ನಿರಾಕರಿಸಲಿಲ್ಲ.

‘ಮುಂಜಾಗರೂಕತಾ ಕ್ರಮವಾಗಿ ನಾವು ಕೆಲವೊಂದು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿದ್ದೆವು. ಚೀನಾ ಸೈನಿಕರು ನಮ್ಮ ಮುಂಚೂಣಿ ಠಾಣೆಗಳ ಅತಿಸಮೀಪಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ಯೋಜಿತ ಕಾರ್ಯತಂತ್ರವೊಂದನ್ನು ಸ್ಥಳೀಯ ಮಟ್ಟದಲ್ಲಿ ಅನುಸರಿಸಿದೆವು. ಅದು ಯಶಸ್ವಿಯಾಯಿತು. ಇದಕ್ಕಿಂತ ಹೆಚ್ಚಿನ ವಿವರಗಳನ್ನು ಮಾಧ್ಯಮಗಳಿಗೆ ನೀಡುವುದು ದೇಶದ ಭದ್ರತೆಯ ದೃ‍ಷ್ಟಿಯಿಂದ ಒಳಿತಲ್ಲ’ ಎಂದಷ್ಟೇ ಸೇನೆಯ ಉನ್ನತ ಮೂಲಗಳು ಪ್ರತಿಕ್ರಿಯಿಸಿದ್ದವು.

ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ದಕ್ಷಿಣದ ದಂಡೆಯ ಮುಖ್ಯ ಗಿರಿಶಿಖರಗಳಲ್ಲಿ ಭಾರತೀಯ ಸೇನೆ ಇದೀಗ ಕಾವಲು ಠಾಣೆಗಳನ್ನು ಸ್ಥಾಪಿಸಿದೆ. ಚುಶುಲ್ ವಲಯದ ರೆಗಿನ್ ಪಾಸ್ ಮತ್ತು ಸ್ಪಗ್ಗುರ್ ಗ್ಯಾಪ್‌ಗಳು ಭಾರತೀಯ ಸೇನೆಯ ನಿಯಂತ್ರಣದಲ್ಲಿವೆ. ಚೀನಾ ಸೇನೆಯನ್ನು ಎದುರಿಸುವ ಕಾರ್ಯತಂತ್ರಗಳಲ್ಲಿ ಅಗತ್ಯ ಬದಲಾವಣೆಗಳನ್ನು ಜಾರಿ ಮಾಡಲಾಗಿದ್ದು, ಎಲ್‌ಎಸಿಯಲ್ಲಿ ಈ ಹಿಂದೆ ಠಾಣೆಗಳು ಇರದಿದ್ದ, ಗಸ್ತು ನಡೆಸದಿದ್ದ ಪ್ರದೇಶದಲ್ಲಿಯೂ ಸೇನೆಯನ್ನು ನಿಯೋಜಿಸಲಾಗಿದೆ.

ಭಾರತೀಯ ಸೇನೆಯ ಎಲ್ಲ ಕ್ರಮಗಳೂ ರಕ್ಷಣಾತ್ಮಕವಾಗಿಯೇ ಇವೆ. ಆಕ್ರಮಣಶೀಲತೆಯನ್ನು ಉದ್ದೇಶವಾಗಿರಿಸಿಕೊಂಡು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಚೀನೀಯರು ಮುಂದೊತ್ತರಿಸುವುದನ್ನು ತಡೆಯುವುದರತ್ತ ಸೇನೆ ದೃಷ್ಟಿ ನೆಟ್ಟಿದೆ ಎಂದು ಸೇನೆಯ ಉನ್ನತ ಮೂಲಗಳನ್ನು ಉಲ್ಲೇಖಿಸಿ ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.