
ನವದೆಹಲಿ: ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸುವ ಭಾರತೀಯ ಪ್ರವಾಸಿಗರು ತಮ್ಮ ವೈಯಕ್ತಿಕ ಬಳಕೆಗಾಗಿ ತೆಗೆದುಕೊಂಡು ಹೋಗುವ ಔಷಧಿಗಳ ಕುರಿತು ಅಲ್ಲಿನ ಆಡಳಿತದಿಂದ ಆನ್‌ಲೈನ್ ಮೂಲಕ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದೆ ಎಂದು ಎನ್‌ಸಿಬಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಮತ್ತು ಇತರ ದೇಶಗಳಲ್ಲಿ ಕಾನೂನಾತ್ಮಕವಾಗಿ ಲಭ್ಯವಿರುವ ಕೆಲ ಔಷಧಿಗಳನ್ನು ಸೌದಿ ಅರೇಬಿಯಾ ‘ನಿರ್ಬಂಧಿತ’ ಅಥವಾ ‘ನಿಷೇಧಿತ’ ಎಂದು ಘೋಷಿಸಿರಬಹುದು. ಹೀಗಾಗಿ ಕೆಲ ಔಷಧಿಗಳನ್ನು ವೈಯಕ್ತಿಕ ಬಳಕೆಗಾಗಿ ತಮ್ಮೊಂದಿಗೆ ಸೌದಿಗೆ ತೆಗೆದುಕೊಂಡು ಹೋಗುವ ಭಾರತೀಯ ಪ್ರವಾಸಿಗರು ಅದಕ್ಕೆ ಅಗತ್ಯವಿರುವ ಅನುಮತಿ ತೆಗೆದುಕೊಳ್ಳಬೇಕು ಎಂದು ಅದು ಸಲಹೆ ನೀಡಿದೆ.
ನಿಗದಿಗಿಂತ ಹೆಚ್ಚಿನ ಪ್ರಮಾಣದ ಔಷಧಿಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಒಂದು ವೇಳೆ ತೆಗೆದುಕೊಂಡು ಹೋದರೆ ಅಲ್ಲಿ ಕಾನೂನು ಕ್ರಮಗಳನ್ನು ಎದುರಿಸಬೇಕಾಗಬಹುದು ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
ವೈಯಕ್ತಿಕ ಬಳಕೆಗಾಗಿ ಔಷಧಿಗಳನ್ನು ತೆಗೆದುಕೊಂಡು ಸೌದಿಗೆ ಹೋಗುವ ಪ್ರವಾಸಿಗರು https://cds.sfda.gov.sa ವೆಬ್‌ಸೈಟ್‌ನಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಅದು ಹೇಳಿದೆ. ಅಲ್ಲದೆ ಪ್ರವಾಸಿಗರು ಸೌದಿಗೆ ತೆರಳವುದಕ್ಕೂ ಮುನ್ನ, ಅಲ್ಲಿನ ಆಡಳಿತ ಅಧಿಕೃತವಾಗಿ ಪ್ರಕಟಿಸಿರುವ ನಿರ್ಬಂಧಿತ ಮತ್ತು ನಿಷೇಧಿತ ಔಷಧಿಗಳ ಪಟ್ಟಿ ಪರಿಶೀಲಿಸುವಂತೆಯೂ ಎನ್‌ಸಿಬಿ ಸಲಹೆ ನೀಡಿದೆ.
ಸೌದಿ ಅರೇಬಿಯಾದ ಮಾದಕ ದ್ರವ್ಯ ನಿಯಂತ್ರಣ ಮಹಾ ನಿರ್ದೇಶನಾಲಯವು ಈ ಕುರಿತು ಎನ್‌ಸಿಬಿಗೆ ಔಪಚಾರಿಕವಾಗಿ ಮಾಹಿತಿ ನೀಡಿದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.