ADVERTISEMENT

‘ಇಂಡಿಗೊ’ ಸಂಸ್ಥೆಯ 1232 ವಿಮಾನ ಹಾರಾಟ ಸ್ಥಗಿತ: ದೆಹಲಿ ಸೇರಿ ಹಲವೆಡೆ ಜನರ ಪರದಾಟ

ದೇಶೀಯ, ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನಗಳ ಹಾರಾಟ ಸ್ಥಗಿತ: ದೆಹಲಿ, ಮುಂಬೈ ಸೇರಿ ಹಲವೆಡೆ ವ್ಯತ್ಯಯ

ಪಿಟಿಐ
Published 4 ಡಿಸೆಂಬರ್ 2025, 18:00 IST
Last Updated 4 ಡಿಸೆಂಬರ್ 2025, 18:00 IST
<div class="paragraphs"><p>ಇಂಡಿಗೊ ಏರ್‌ಲೈನ್ಸ್‌ನ ವಿಮಾನಗಳು ರದ್ದಾಗಿದ್ದರಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಟಿಕೆಟ್‌ ಕಿಯೊಸ್ಕ್‌ ಮುಂದೆ ಗುರುವಾರ ಸಾಲುಗಟ್ಟಿ ನಿಂತಿದ್ದರು</p></div>

ಇಂಡಿಗೊ ಏರ್‌ಲೈನ್ಸ್‌ನ ವಿಮಾನಗಳು ರದ್ದಾಗಿದ್ದರಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಟಿಕೆಟ್‌ ಕಿಯೊಸ್ಕ್‌ ಮುಂದೆ ಗುರುವಾರ ಸಾಲುಗಟ್ಟಿ ನಿಂತಿದ್ದರು

   

–ಪಿಟಿಐ ಚಿತ್ರ

ಮುಂಬೈ: ಭಾರತದ ಅತೀ ದೊಡ್ಡ ಏರ್‌ಲೈನ್ಸ್‌ ‘ಇಂಡಿಗೊ’ ಸಂಸ್ಥೆಯ 1,232ಕ್ಕೂ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನಗಳ ಹಾರಾಟವನ್ನು ಗುರುವಾರ ಸ್ಥಗಿತಗೊಳಿಸಿತು. ಇದರಿಂದ, ಸತತ ಮೂರನೇ ದಿನವೂ ಸಂಸ್ಥೆಯ ವಿಮಾನಗಳ ಹಾರಾಟಗಳಲ್ಲಿ ವ್ಯತ್ಯಯ ಉಂಟಾಗಿ ಬೆಂಗಳೂರು, ದೆಹಲಿ, ಮುಂಬೈ ಹಾಗೂ ಇತರೆ ನಗರಗಳಿಂದ ವಿವಿಧೆಡೆಗೆ ತೆರಳುವ ಲಕ್ಷಾಂತರ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.

ADVERTISEMENT

ಸಮಯಪಾಲನೆಗೆ ಹೆಸರುವಾಸಿಯಾಗಿದ್ದ ‘ಇಂಡಿಗೊ’ ಸಮಯ ಮರು ಹೊಂದಾಣಿಕೆ ಮಾಡಿದ್ದರಿಂದ ನೂರಾರು ವಿಮಾನಗಳ ಹಾರಾಟದಲ್ಲಿ ವಿಳಂಬವಾದವು. ಸಂಸ್ಥೆಯ ಸಮಯಪಾಲನೆ ನಿಖರತೆ ಅವಧಿಯೂ ಶೇಕಡ 19.7ಕ್ಕೆ ಕುಸಿದಿದ್ದು, ಗುರುವಾರ ಮಧ್ಯಾಹ್ನದವರೆಗೂ 300ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ. 

ದೆಹಲಿ ವಿಮಾನ ನಿಲ್ದಾಣದಲ್ಲಿ 95 ವಿಮಾನಗಳ ಹಾರಾಟ ರದ್ದುಗೊಂಡರೆ, ಮುಂಬೈ ನಿಲ್ದಾಣದಲ್ಲಿ 85 ಹಾಗೂ ಹೈದರಾಬಾದ್‌ನಲ್ಲಿ 75 ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50 ವಿಮಾನಗಳ ಹಾರಾಟ ರದ್ದುಗೊಂಡಿತ್ತು. ಉಳಿದಂತೆ, ಇತರೆ ವಿಮಾನ ನಿಲ್ದಾಣಗಳಲ್ಲಿ ಹಾರಾಟವೂ ರದ್ದಾಗಿತ್ತು ಎಂದು ಮೂಲಗಳು ಧೃಢಪಡಿಸಿವೆ. 

ದೇಶದ ಪ್ರಮುಖ ಆರು ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಹಾಗೂ ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿ ಇಂಡಿಗೊ ವಿಮಾನ ನಿಲ್ದಾಣದ ಸಮಯ ಪರಿಪಾಲನೆಯು ಬುಧವಾರ ಶೇ 19.7ಕ್ಕೆ ಇಳಿಕೆಯಾಗಿತ್ತು. ಮಂಗಳವಾರ ಈ ಪ್ರಮಾಣವು ಶೇಕಡ 35ರಷ್ಟಿತ್ತು ಎಂದು ಅಂಕಿಅಂಶಗಳಿಂದ ಕಂಡುಬಂದಿದೆ.

ಪರಿಸ್ಥಿತಿ ಕುರಿತಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ವಿಮಾನಯಾನ ಸಂಸ್ಥೆಯ ಅಧಿಕಾರಿಗಳ ಜೊತೆಗೆ ಗುರುವಾರ ತುರ್ತು ಸಭೆ ನಡೆಸಿ ಚರ್ಚಿಸಿದೆ.

ಇಂಡಿಗೊ ವಿಮಾನಗಳ ವ್ಯತ್ಯಯ ಉಂಟಾದ ಕುರಿತು ಕಾರಣ ಹಾಗೂ ಸದ್ಯದ ಪರಿಸ್ಥಿತಿ ಕುರಿತು ವಿಸ್ತೃತ ವರದಿ ನೀಡುವಂತೆ ಇಂಡಿಗೊ ಸಂಸ್ಥೆಗೆ ಡಿಜಿಸಿಎ ಅಧಿಕಾರಿಗಳು ಸೂಚನೆ ನೀಡಿದ್ದು, ವಿಮಾನಗಳ ಹಾರಾಟ ರದ್ದು ಹಾಗೂ ವಿಳಂಬವನ್ನು ಕಡಿಮೆಗೊಳಿಸುವಂತೆ ತಿಳಿಸಿದೆ.

ಷೇರು ಕುಸಿತ:

ವಿಮಾನಗಳ ಹಾರಾಟ ರದ್ದುಗೊಂಡಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಇಂಡಿಗೊ ಷೇರುಗಳ ಮೌಲ್ಯವು ಗುರುವಾರ ಮಧ್ಯಾಹ್ನದ ವೇಳೆಗೆ ಶೇಕಡ 3ರಷ್ಟು ಕುಸಿತ ದಾಖಲಿಸಿತು.

ಸಂಸ್ಥೆಯಲ್ಲಿ ವಿಮಾನ ಕರ್ತವ್ಯದ ಸಮಯದ ಮಿತಿ (ಎಫ್‌ಡಿಟಿಎಲ್‌) ಎರಡನೇ ಹಂತವನ್ನು ಜಾರಿಗೊಳಿಸಿದ್ದರಿಂದ ಸಿಬ್ಬಂದಿ ಕೊರತೆಯಾಗಿದೆ. ಇದರಿಂದಲೇ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಗೊ ಏರ್‌ಲೈನ್ಸ್ ಸಂಸ್ಥೆಯು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರ್ಗದಲ್ಲಿ 2,300 ವಿಮಾನಗಳ ಹಾರಾಟ ನಡೆಸುತ್ತಿವೆ. ಕಳೆದೆರಡು ದಿನಗಳ ವಿಮಾನಗಳ ಹಾರಾಟ ವ್ಯತ್ಯಯ ಉಂಟಾಗಿದ್ದಕ್ಕೆ ಪ್ರಯಾಣಿಕರ ಕ್ಷಮೆಯಾಚಿಸಿದ್ದು, ಪರಿಸ್ಥಿತಿ ಸಹಜಸ್ಥಿತಿಗೆ ತರುವ ನಿಟ್ಟಿನಲ್ಲಿ ವಿಮಾನಗಳ ಹಾರಾಟವನ್ನು ಮರು ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಎಫ್‌ಐಪಿ ಆಕ್ರೋಶ:

‘ವಿಮಾನಗಳ ಕೆಲಸದ ಹೊಸ ನೀತಿ ಹಾಗೂ ಪೈಲಟ್‌ಗಳ ವಿಶ್ರಾಂತಿ ನೀತಿ ಜಾರಿಗೊಳಿಸಲು ಸಂಸ್ಥೆಗೆ ಎರಡು ವರ್ಷಗಳ ಕಾಲ ಗಡುವನ್ನು ಸರ್ಕಾರ ನೀಡಿತ್ತು. ಆದರೂ, ಹೊಸ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು’ ಎಂದು ಭಾರತೀಯ ಪೈಲಟ್‌ಗಳ ಒಕ್ಕೂಟ (ಎಫ್‌ಐ‍ಪಿ)ವು ಆಕ್ರೋಶ ವ್ಯಕ್ತಪಡಿಸಿದೆ. 

ಪ್ರಯಾಣಿಕರ ಸುರಕ್ಷತೆ ಹಾಗೂ ವಿಶ್ವಾಸರ್ಹತೆಗೆ ತಕ್ಕಂತೆ ಸಂಸ್ಥೆಯು ಅಗತ್ಯ ಸಿಬ್ಬಂದಿ ಹೊಂದದ ಹೊರತಾಗಿ ಯಾವುದೇ ಕಾರಣಕ್ಕೂ ಋತುಮಾನಗಳ (ಸೀಸನಲ್‌) ವಿಮಾನಗಳ ಹಾರಾಟಕ್ಕೂ ಅವಕಾಶ ನೀಡಬಾರದು ಎಫ್ಐಪಿಯು ಡಿಜಿಸಿಎ ಅನ್ನು ಒತ್ತಾಯಿಸಿದೆ.

‘ಇಂಡಿಗೊ ವಿಮಾನಯಾನ ಸಂಸ್ಥೆಯಲ್ಲಿ ಸಿಬ್ಬಂದಿ ಕಾರ್ಯಾಚರಣೆ ವ್ಯತ್ಯಯ ಉಂಟಾಗಲು ಸಂಸ್ಥೆಯು ಪೂರ್ವ ಸಿದ್ಧತೆಯ ಕೊರತೆಯೇ ಕಾರಣ’ ಎಂದು ಭಾರತೀಯ ವಿಮಾನಯಾನ ಪೈಲಟ್‌ಗಳ ಸಂಘ (ಎಎಲ್‌‍ಪಿಎ)  ಆರೋಪಿಸಿದೆ. ಇದು ಡಿಜಿಸಿಎ ಪ್ರಕಟಿಸಿರುವ ಹೊಸ ನಿಯಾಮವಳಿಗಳ ಮೇಲೆ ಒತ್ತಡ ತಂತ್ರವೂ ಇರಬಹುದು ಎಂದು ಎಚ್ಚರಿಸಿದೆ.

ಪೀಟರ್‌ ಎಲ್ಬರ್ಸ್‌ ಇಂಡಿಗೊ ಸಿಇಒ
ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವುದು ಸಮಯ ಪರಿಪಾಲನೆಯನ್ನು ಮತ್ತೆ ಹಳಿಗೆ ತರುವುದು ತಕ್ಷಣದ ಗುರಿಯಾಗಿದೆ
ಪೀಟರ್‌ ಎಲ್ಬರ್ಸ್‌ ಇಂಡಿಗೊ ಸಿಇಒ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರ ಆಕ್ರೋಶ
ಇಂಡಿಗೊ ಈಗ ಭೀಕರ ಸ್ಥಿತಿಯಲ್ಲಿದೆ. ಒಂದಾದ ನಂತರ ಒಂದರಂತೆ ವಿಮಾನಗಳ ಹಾರಾಟ ರದ್ದುಗೊಂಡಿದೆ. ಪ್ರಯಾಣಿಕರು ಸಂಸ್ಥೆಯ ಸಿಬ್ಬಂದಿ ಜೊತೆ ಜಗಳಕ್ಕೆ ಇಳಿದಿದ್ದಾರೆ. ಹಾರಾಟದ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಇಂದು ಪ್ರಯಾಣಿಸುವ ಉದ್ದೇಶವಿದ್ದರೆ, ನಿಲ್ದಾಣಕ್ಕೆ ಬರಬೇಡಿ
ಅರುಣ್‌ ಪ್ರಭುದೇಸಾಯಿ,ಅರ್ಮ್ಕೊಸ್‌ ಮಿಡಿಯಾ ಸಂಸ್ಥಾ‍ಪಕ

ಅರುಣ್‌ ಪ್ರಭುದೇಸಾಯಿ

ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿ, ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಪ್ರಯಾಣದರ, ಕಳಪೆ ಮೂಲಸೌಕರ್ಯ, ವಿಮಾನ ರದ್ದತಿಗಳು ಪುನರಾವರ್ತನೆಯಾಗುತ್ತಿವೆ. ವಿಮಾನಯಾನ ಸಚಿವರು ಈ ಕುರಿತು ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಬಹುದು ಎಂದು ನಿರೀಕ್ಷಿಸುತ್ತೇನೆ
ಪ್ರಿಯಾಂಕ ಚತುರ್ವೇದಿ,ಶಿವಸೇನಾ (ಯುಬಿಟಿ) ರಾಜ್ಯಸಭಾ ಸಂಸದೆ

ಪ್ರಿಯಾಂಕ ಚತುರ್ವೇದಿ

ಶೇಕಡ 60ರಷ್ಟು ಮಾರುಕಟ್ಟೆಯ ಪಾಲು ಜವಾಬ್ದಾರಿಯಿಂದ ಬರುತ್ತದೆ ಹೊರತು ನೆಪದಿಂದ ಅಲ್ಲ. ಇಂಡಿಗೊ ಸಂಸ್ಥೆಯು ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ. ಈ ಕುರಿತು ಡಿಜಿಸಿಎ ಕಠಿಣವಾದ ಕ್ರಮ ಕೈಗೊಳ್ಳಬೇಕು
ಸತ್ಯಜಿತ್‌ ತಂಬೆ ಪಾಟೀಲ್, ಪಕ್ಷೇತರ ಶಾಸಕ ಮಹಾರಾಷ್ಟ್ರ

ಸತ್ಯಜಿತ್‌ ತಂಬೆ ಪಾಟೀಲ್

ಇಂಡಿಗೊ ವಿಮಾನವು ಪುಣೆಯ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಸೃಷ್ಟಿಸಿದೆ. ಪ್ರಯಾಣಿಕರಿಗೆ ಯಾವುದೇ ಮಾಹಿತಿ ಇಲ್ಲ. ಸಿಬ್ಬಂದಿ ಸ್ಪಂದಿಸುತ್ತಿಲ್ಲ ವಿಮಾನ ಹಾರಾಟದ ಬಗ್ಗೆ ಖಾತರಿಯಿಲ್ಲ
-ಡಾ. ಪ್ರಶಾಂತ್‌ ಪನ್ಸಾರೆ ಸಂಸ್ಥಾಪಕ ರುಬಿಸ್ಕೇಪ್‌.ಕಾಮ್‌

ಡಾ. ಪ್ರಶಾಂತ್‌ ಪನ್ಸಾರೆ

ಇಂಡಿಗೊ ಸಂಸ್ಥೆಯು ಪುಣೆ ವಿಮಾನನಿಲ್ದಾಣವನ್ನು ರೈಲು ನಿಲ್ದಾಣವಾಗಿ ಪರಿವರ್ತಿಸಿದೆ
-ರಿಶಿಕೇಷ್‌ ತಕ್ಸಲೆ ಕಂಟೆಟ್‌ ತಂತ್ರಜ್ಞ

ರಿಶಿಕೇಷ್‌ ತಕ್ಸಲೆ

ಎರಡು ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ 

ಅಹಮದಾಬಾದ್‌: ಸೌದಿ ಅರೇಬಿಯಾದ ಮದೀನಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ಬೆದರಿಕೆ ಕರೆ ಬಂದ ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

‘ಮಧ್ಯಾಹ್ನ 12.30ಕ್ಕೆ ವಿಮಾನವನ್ನು ಇಲ್ಲಿನ ಸರ್ದಾರ್‌ ವಲ್ಲಭಬಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಎಲ್ಲ ಪ್ರಯಾಣಿಕರನ್ನು ಇಳಿಸಿದ ಬಳಿಕ ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು’ ಎಂದು ಡಿಸಿಪಿ (ವಲಯ 4) ಅತುಲ್‌ ಬನ್ಸಾಲ್‌ ತಿಳಿಸಿದ್ದಾರೆ.

ಶಾರ್ಜಾದಿಂದ ಹೈದರಾಬಾದ್‌ಗೆ ಬಂದಿಳಿದ ಇಂಡಿಗೊ ವಿಮಾನದಲ್ಲಿ ಬಾಂಬ್‌ ಇಡಲಾಗಿದೆ ಎಂದು ಹೈದರಾಬಾದ್‌ನ ರಾಜೀವ್‌ ಗಾಂಧಿ ವಿಮಾನ ನಿಲ್ದಾಣದ ಅಧಿಕಾರಿಗಳು ಇ–ಮೇಲ್‌ ಸ್ವೀಕರಿಸಿದ್ದರು. ವಿಮಾನ ಕೆಳಗಿಳಿಯುತ್ತಿದ್ದಂತೆಯೇ, ಭದ್ರತಾ ಸಿಬ್ಬಂದಿಗಳು ಶೋಧ ನಡೆಸಿ ಹುಸಿ ಕರೆ ಎಂದು ಖಚಿತಪಡಿಸಿದರು.

ಹೈದರಾಬಾದ್‌ ವಿಮಾನ 8 ಗಂಟೆ ವಿಳಂಬ
ಬೆಂಗಳೂರಿನಿಂದ ಹೈದರಾಬಾದ್‌ಗೆ ಬೆಳಿಗ್ಗೆ 11.55 ತೆರಳಬೇಕಿದ್ದ ವಿಮಾನ ರಾತ್ರಿ 8 ಗಂಟೆಗೆ ಹೊರಡಲಿದೆ ಎಂದು ಪ್ರಯಾಣಿಕರಿಗೆ ಸಿಬ್ಬಂದಿ ತಿಳಿಸಿದರು. ಬೆಳಿಗ್ಗೆ 11.55ಕ್ಕೆ ಹೊರಡುವ ವಿಮಾನ ಹತ್ತಲು ಬೆಳಗ್ಗೆ 8 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಭದ್ರತಾ ತಪಾಸಣೆ ಮುಗಿಸಿಕೊಂಡು ಬೋರ್ಡಿಂಗ್ ಗೇಟ್‌ನಲ್ಲೇ ಕಾಯುವ ಅನಿವಾರ್ಯ ಉಂಟಾಯಿತು. ಇಷ್ಟು ಸುದೀರ್ಘವಾಗಿ ಕಾಯುವ ಬದಲಿಗೆ ರಸ್ತೆ ಮಾರ್ಗವಾಗಿ ತೆರಳಿದ್ದರೆ ಇಷ್ಟೊತ್ತಿಗಾಗಲೇ ಹೈದರಾಬಾದ್‌ಗೆ ತಲುಪುತ್ತಿದ್ದೆವು ಎಂದು ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.