ADVERTISEMENT

ಅಂಗವಿಕಲ ಬಾಲಕ ವಿಮಾನವೇರದಂತೆ ತಡೆದ ಇಂಡಿಗೊ ಸಿಬ್ಬಂದಿ: ಸಚಿವ ಸಿಂಧಿಯಾ ಗರಂ

ಪಿಟಿಐ
Published 9 ಮೇ 2022, 8:26 IST
Last Updated 9 ಮೇ 2022, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆತಂಕದಲ್ಲಿದ್ದಾನೆ ಎಂಬ ಕಾರಣ ನೀಡಿ ಅಂಗವಿಕಲ ಬಾಲಕನೊಬ್ಬನನ್ನು ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ವಿಮಾನವೇರದಂತೆ ತಡೆದ ಘಟನೆ ರಾಂಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಯಾವೊಬ್ಬ ವ್ಯಕ್ತಿಯನ್ನೂ ಈ ರೀತಿ ನಡೆಸಿಕೊಳ್ಳಬಾರದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದು, ಘಟನೆ ಬಗ್ಗೆ ಖುದ್ದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಶನಿವಾರ ರಾಂಚಿ–ಹೈದರಾಬಾದ್ ವಿಮಾನ ಏರಲು ಬಾಲಕನಿಗೆ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಹೀಗಾಗಿ ಆತನ ತಂದೆ–ತಾಯಿ ಕೂಡ ಪ್ರಯಾಣಿಸದೇ ಉಳಿದಿದ್ದರು. ಮತ್ತೊಬ್ಬ ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದರಿಂದ ಭಾನುವಾರ ವಿಚಾರ ಬಯಲಾಗಿತ್ತು.

ADVERTISEMENT

ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಂಧಿಯಾ, ‘ಇಂಥ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಯಾವೊಬ್ಬ ವ್ಯಕ್ತಿಯನ್ನೂ ಈ ರೀತಿ ನಡೆಸಿಕೊಳ್ಳಬಾರದು. ಘಟನೆ ಬಗ್ಗೆ ನಾನೇ ತನಿಖೆ ನಡೆಸುತ್ತೇನೆ. ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಉಲ್ಲೇಖಿಸಿದ್ದಾರೆ.

ಇಂಡಿಗೊದಿಂದ ವರದಿ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಮುಖ್ಯಸ್ಥ ಅರುಣ್ ಕುಮಾರ್ ತಿಳಿಸಿದ್ದಾರೆ.

ಡಿಜಿಸಿಎ ತನಿಖೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.