
ಇಂಡಿಗೊ ವಿಮಾನ
ಪಣಜಿ: ಇಂಡಿಗೊ ವಿಮಾನಗಳ ಹಾರಾಟದಲ್ಲಿ ಉಂಟಾದ ಅಡಚಣೆಯಿಂದಾಗಿ ಗೋವಾದ ದಬೋಲಿಮ್ ವಿಮಾನ ನಿಲ್ದಾಣದಿಂದ 31 ವಿಮಾನಗಳು ರದ್ದಾಗಿವೆ.
ವಿಮಾನಗಳ ಹಾರಾಟ ರದ್ದಾಗುತ್ತಿರುವುದರಿಂದ ತಾವು ಕಾಯ್ದಿರಿಸಿದ ವಿಮಾನಗಳ ಹಾರಾಟದ ಸ್ಥಿತಿಗತಿಯನ್ನು ಇಂಡಿಗೊ ಅಂತರ್ಜಾಲ ತಾಣದಲ್ಲಿ ಪರಿಶೀಲಿಸಿಕೊಳ್ಳುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.
ಬೆಂಗಳೂರು, ಸೂರತ್, ಚೆನ್ನೈ, ಹೈದರಾಬಾದ್, ಅಹಮದಾಬಾದ್, ದೆಹಲಿ, ಜೈಪುರ ಸೇರಿದಂತೆ ಪ್ರಮುಖ ನಗರಗಳಿಗೆ ತೆರಳಬೇಕಾಗಿದ್ದ ವಿಮಾನಗಳು ರದ್ದಾಗಿವೆ.
ವಿಮಾನ ಹಾರಾಟ ರದ್ದಾದ ಕಾರಣ ಅಹಮದಾಬಾದ್‌ಗೆ ತೆರಳಬೇಕಿದ್ದ 22 ಪ್ರಯಾಣಿಕರ ತಂಡವು ಗೋವಾದಲ್ಲೇ ಸಿಲುಕಿದೆ. ‘ವಿಮಾನ ರದ್ದಾದ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಕೊನೆಯ ನಿಮಿಷಗಳವರೆಗೂ ವಿಮಾನ ಹಾರಾಟ ನಿಗದಿತ ಸಮಯಕ್ಕೆ ಆಗಲಿದೆ ಎಂದಿದ್ದರು. ಆದರೆ ಏಕಾಏಕಿ ವಿಮಾನ ರದ್ದಾದ ಕುರಿತು ಸಂದೇಶ ಕಳಿಸಿದ್ದಾರೆ’ ಎಂದು ಮಹಿಳಾ ಪ್ರಯಾಣಿಕರೊಬ್ಬರು ಪಿಟಿಐಗೆ ತಿಳಿಸಿದರು.
ವಿಮಾನ ಹಾರಾಟದಲ್ಲಿ ಅದರಲ್ಲೂ ದೇಶಿಯ ವಿಮಾನ ಹಾರಾಟದಲ್ಲಿ ಅತಿಹೆಚ್ಚು ಪ್ರಯಾಣಿಕರನ್ನು ಸೆಳೆಯುವ ಇಂಡಿಗೊ ವಿಮಾನದ ಹಾರಾಟದಲ್ಲಿ ಸಮಸ್ಯೆಯಾಗಿದ್ದು, ಪ್ರವಾಸಿಗರ ನೆಚ್ಚಿನ ಸ್ಥಳವಾದ ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡುತ್ತಿದೆ ಎಂದು ಗೋವಾದ ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಜ್ಯಾಕ್ ಸುಖಿಜಾ ಹೇಳಿದ್ದಾರೆ
‘ಇಂಡಿಗೊ ಭಾರತೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಅದರ ವಿಮಾನ ಕಾರ್ಯಾಚರಣೆಯಲ್ಲಿನ ಅಡಚಣೆಗಳು ಪ್ರವಾಸೋದ್ಯಮ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈಗ ಉಂಟಾದ ಅಡಚಣೆಗಳು ಗೋವಾದ ಪ್ರಮುಖ ಆದಾಯ ಗಳಿಸುವ ಪ್ರವಾಸೋದ್ಯಮ ಉದ್ಯಮದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ’ ಎಂದಿದ್ದಾರೆ.
‘ವಿಮಾನ ರದ್ದಾದ ಕಾರಣ ಗೋವಾಕ್ಕೆ ಬಂದಿದ್ದವರೂ ವಾಪಸ್ ತೆರಳಲಾಗುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆದರೆ ಬೇಗ ಪರಿಸ್ಥಿತಿ ಸ್ಥಿರವಾದರೆ ಉತ್ತಮವಾಗಿರುತ್ತದೆ. ಆದರೆ ಮುಂದಿನ 2-3 ದಿನಗಳವರೆಗೆ, ಖಂಡಿತವಾಗಿಯೂ ಪರಿಣಾಮ ಬೀರುತ್ತದೆ’ ಎಂದು ಸುಖಿಜಾ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.