
ನವದೆಹಲಿ: ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರಲ್ಲಿದ್ದ ಧೈರ್ಯ, ದೇಶಭಕ್ತಿಯು ಅನ್ಯಾಯದ ವಿರುದ್ಧ ಹೋರಾಡಲು ತಮ್ಮನ್ನು ಪ್ರೇರೇಪಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದು (ನವೆಂಬರ್ 19) ಇಂದಿರಾ ಗಾಂಧಿ ಜನ್ಮದಿನ. ಈ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿರುವ ಅವರ ಸಮಾಧಿ 'ಶಕ್ತಿ ಸ್ಥಳ'ಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿರುವ ರಾಹುಲ್, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್, 'ಭಾರತಕ್ಕಾಗಿ ದೃಢ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಮತ್ತು ಪ್ರತಿಯೊಂದು ಸನ್ನಿವೇಶದಲ್ಲೂ ದೇಶದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದಕ್ಕೆ ನನ್ನ ಅಜ್ಜಿಯಿಂದ ಸ್ಫೂರ್ತಿ ಪಡೆದಿದ್ದೇನೆ. ಅನ್ಯಾಯದ ವಿರುದ್ಧ ದೃಢವಾಗಿ ನಿಲ್ಲಲು ಅವರ ಧೈರ್ಯ, ದೇಶಭಕ್ತಿ ಮತ್ತು ನೈತಿಕತೆಯು ನನ್ನನ್ನು ಪ್ರೇರೇಪಿಸುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ಇಂದಿರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಗೌರವ ಸಲ್ಲಿಸಿದ್ದಾರೆ.
1917ರ ನವೆಂಬರ್ 19ರಂದು ಜನಿಸಿದ ಇಂದಿರಾ, 1966–1977ರ ಅವಧಿಯಲ್ಲಿ ಪ್ರಧಾನಿಯಾಗಿದ್ದರು. 1980ರಲ್ಲಿ ಮತ್ತೊಮ್ಮೆ ಆ ಸ್ಥಾನಕ್ಕೇರಿದ್ದ ಅವರು, ಅಧಿಕಾರದಲ್ಲಿದ್ದಾಗಲೇ 1984ರ ಅಕ್ಟೋಬರ್ 31ರಂದು ಹತ್ಯೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.