
ನವದೆಹಲಿ: ಭಾರತದ ಮಾಜಿ ಪ್ರಧಾನಿ, ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 108ನೇ ಜನ್ಮದಿನ ಇಂದು (ನ.19). ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಇಂದಿರಾ ಅವರನ್ನು ಸ್ಮರಿಸಿದ್ದಾರೆ.
‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು’ ಎಂದು ಪ್ರಧಾನಿ ನರೇಂದ್ರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದೇಶಕ್ಕಾಗಿ ನಿರ್ಭೀತರಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಪ್ರತಿ ಪರಿಸ್ಥಿತಿಯಲ್ಲಿಯೂ ದೇಶದ ಹಿತಾಸಕ್ತಿಯನ್ನು ಮೊದಲ ಸ್ಥಾನದಲ್ಲಿರಿಸಲು ನನ್ನ ಅಜ್ಜಿ (ಇಂದಿರಾ ಗಾಂಧಿ) ನನಗೆ ಸ್ಫೂರ್ತಿ ನೀಡಿದ್ದಾರೆ. ಅವರ ಧೈರ್ಯ, ದೇಶಭಕ್ತಿ ಮತ್ತು ನೈತಿಕತೆಯು ಅನ್ಯಾಯದ ವಿರುದ್ಧ ಬಲವಾಗಿ ನಿಲ್ಲಲು ನನಗೆ ಸ್ಫೂರ್ತಿ ನೀಡುತ್ತಲೇ ಇದೆ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಇಂದಿರಾ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ.
ಇಂದಿರಾ ಗಾಂಧಿ ಅವರು 1917ರಲ್ಲಿ ನವೆಂಬರ್ 19ರಂದು ಅಲಹಾಬಾದ್‌ನಲ್ಲಿ ಜನಿಸಿದ್ದರು. ಇಂದಿರಾ ಗಾಂಧಿ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುತ್ರಿ. ತಾಯಿ ಕಮಲಾ ನೆಹರು. ಇಂದಿರಾ ಅವರು ದೆಹಲಿ, ಅಲಹಾಬಾದ್, ಪುಣೆ, ಮುಂಬೈ ಹಾಗೂ ಜಿನೀವಾ, ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡಿದ್ದರು.
ಭಾರತಕ್ಕೆ ಮರಳಿದ ನಂತರ ಅವರು 1942ರಲ್ಲಿ ಫಿರೋಜ್ ಗಾಂಧಿಯನ್ನು ವಿವಾಹವಾಗಿದ್ದರು. ಅವರಿಗೆ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ರಾಜೀವ್ ಗಾಂಧಿ ಕೂಡ ಭಾರತ ಪ್ರಧಾನಿಯಾಗಿದ್ದರು.
1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರನ್ನು ಅವರ ಇಬ್ಬರು ಅಂಗರಕ್ಷಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.