
ರವೀಂದ್ರನಾಥ ಟ್ಯಾಗೋರ್, ಇಂದಿರಾ ಗಾಂಧಿ
ನವದೆಹಲಿ: ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ರಾಜಕೀಯದಲ್ಲಿ ಹೇಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಿದ್ಧಹಸ್ತರೋ ಹಾಗೆಯೇ ಭಾಷೆಯ ಪ್ರಭುತ್ವದ ಮೇಲೂ ಅಷ್ಟೇ ಹಿಡಿತ ಹೊಂದಿದ್ದವರು. ರವೀಂದ್ರನಾಥ ಟ್ಯಾಗೋರ್ ಅವರ ‘ಏಕಲಾ ಚಲೊ ರೇ...’ ಗೀತೆಯ ಭಾಷಾಂತರವನ್ನು ಅವರು ಸಂಪಾದಿಸಿದ್ದೇ ಇದಕ್ಕೊಂದು ನೈಜ ಉದಾಹರಣೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ.
ಇಂದಿರಾ ಗಾಂಧಿ ಅವರು 108ನೇ ಜನ್ಮದಿನ ಸಂದರ್ಭದಲ್ಲಿ ಅಂದಿನ ದಿನವನ್ನು ಅವರು ಮೆಲುಕು ಹಾಕಿದ್ದಾರೆ.
‘ಇಂದಿರಾ ಗಾಂಧಿ ಅವರು ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ಸುಮಾರು 9 ತಿಂಗಳು (1934ರ ಜುಲೈನಿಂದ 1935ರ ಏಪ್ರಿಲ್) ಇದ್ದರು. ‘ವಿಶ್ವ ಭಾರತಿ’ಗೆ ಪ್ರತಿ ವರ್ಷ ಭೇಟಿ ನೀಡುತ್ತಿದ್ದರು. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಬಹಳಷ್ಟು ವಿಷಯಗಳನ್ನು ಅವರು ಎಚ್.ವೈ.ಶಾರದಾ ಪ್ರಸಾದ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲೊಂದು ‘ಟ್ಯಾಗೋರ್ ಅವರ ‘ಏಕಲಾ ಚಲೊ ರೇ...’ ಎಂಬ ತಮ್ಮ ಮೆಚ್ಚಿನ ಗೀತೆಯ ವಿಷಯ’ ಎಂದು ನೆನಪಿಸಿಕೊಂಡಿದ್ದಾರೆ.
ಟ್ಯಾಗೋರ್ ಅವರ ಅವಿಸ್ಮರಣೀಯ ಗೀತೆಯಾದ ‘ಜೋಡಿ ತೋರ್ ದಕ್ ಶುನೆ ಕೆವು ನ ಆಶೆ‘ ಗೀತೆಯಲ್ಲಿರುವ ‘ಏಕಲಾ ಚಲೋ..’ ಭಾಷಾಂತರದ ಗುಣಮಟ್ಟ ಅವರಿಗೆ ಅಷ್ಟಾಗಿ ಹಿಡಿಸಿರಲಿಲ್ಲ. ಆ ಗೀತೆ ಅವರನ್ನು ಅತಿಯಾಗಿ ಪ್ರಭಾವಿಸಿತ್ತು. ಹೀಗಾಗಿ ಹತರಾಗುವ ಕೆಲ ದಿನಗಳ ಮೊದಲು ಇಂದಿರಾ ಗಾಂಧಿ ಅವರು ಆ ಗೀತೆಯ ಭಾಷಾಂತರದ ಸಂಪಾದನೆಯನ್ನು ಆರಂಭಿಸಿದ್ದರು ಎಂದಿದ್ದಾರೆ.
‘ತಮ್ಮ ಭಾಷಣಗಳನ್ನು ಸಿದ್ಧಪಡಿಸಲು ಇಂದಿರಾ ಅವರು ಅವಿರತ ಶ್ರಮ ಹಾಕುತ್ತಿದ್ದುದನ್ನು ನಾನು ನೋಡಿದ್ದೇನೆ. ಅವರು ಅದ್ಭುತ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಶಿಕ್ಷಣ ಮತ್ತು ಜ್ಞಾನ ಶ್ರೇಷ್ಠ ಮಟ್ಟದ್ದಾಗಿತ್ತು. ಮುಂಚೂಣಿಯ ಲೇಖಕರಾಗಿದ್ದ ಐರಿಸ್ ಮುರ್ಡೊಕ್ ಮತ್ತು ಆ್ಯಂಡ್ರೆ ಮಲ್ರಾಕ್ಸ್ ಅವರೂ ಇಂದಿರಾ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು. ಪ್ರತಿ ಪದಗಳ ಆಯ್ಕೆಯಲ್ಲೂ ಅವರು ಎಚ್ಚರದಿಂದಿರುತ್ತಿದ್ದರು. ಅವುಗಳ ಅರ್ಥವನ್ನು ಆಳವಾಗಿ ವಿಶ್ಲೇಷಿಸಿ ಬಳಸುವ ಪ್ರವೃತ್ತಿ ಅವರದ್ದಾಗಿತ್ತು’ ಎಂದು ಶ್ಯಾಮ್ ಪ್ರಸಾದ್ ಅವರು ತಮ್ಮ ತಂದೆಯ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
‘ಟ್ಯಾಗೋರ್ ಅವರ ಈ ಗೀತೆಯನ್ನು ಭಾಷಾಂತರಿಸುವಾಗ ಇಂದಿರಾ ಗಾಂಧಿ ಅವರು ಯಾವ ಪುಟ್ಟ ಬಾಲಕಿಯನ್ನು ನೆನಪಿಸಿಕೊಂಡಿದ್ದಾರೋ ಎಂಬುದು ಗೊತ್ತಿಲ್ಲ. ಆದರೆ ಅದರ ಭಾಷಾಂತರದಲ್ಲಿ ಅವರು ಪಟ್ಟ ಶ್ರಮ ಎದ್ದು ಕಾಣುತ್ತದೆ. ಅವರ ಕೆಲಸ ಅರ್ಧಕ್ಕೇ ನಿಂತಿರಬಹುದು. ಆದರೆ ಅವರ ಭಾಷಾ ಪ್ರೌಢಮಿಗೆ ಎಂಥವರೂ ಮನಸೋಲದೆ ಇರಲಾರರು’ ಎಂದು ಶ್ಯಾಮ್ ಪ್ರಸಾದ್ ಅವರು ಬರೆದುಕೊಂಡಿದ್ದನ್ನು ಜೈರಾಮ್ ರಮೇಶ್ ಮೆಲುಕು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.