ADVERTISEMENT

ಇಂದೋರ್ | ಕುಡಿದ ಮತ್ತಿನಲ್ಲಿ ಜನರ ಗುಂಪಿನ ಮೇಲೆ ಟ್ರಕ್‌ ಹರಿಸಿದ ಚಾಲಕ; 3 ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2025, 2:29 IST
Last Updated 16 ಸೆಪ್ಟೆಂಬರ್ 2025, 2:29 IST
Shwetha Kumari
   Shwetha Kumari

ಇಂದೋರ್(ಮಧ್ಯ ಪ್ರದೇಶ): ಚಾಲಕನ ನಿಯಂತ್ರಣ ತಪ್ಪಿ ಜನರ ಗುಂಪಿನ ಮೇಲೆ ಟ್ರಕ್‌ವೊಂದು ಹರಿದು ಕನಿಷ್ಠ ಮೂವರು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ಇಂದೋರ್‌ನ ಕಲಾನಿ ನಗರದಲ್ಲಿ ನಡೆದಿದೆ.

ಮದ್ಯ ಸೇವಿಸಿ ವಾಹನ ಚಲಾಯಿಸಿದ್ದರಿಂದ ಈ ದುರ್ಘಟನೆ ನಡೆದಿದೆ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉಪ ಪೊಲೀಸ್ ಆಯುಕ್ತ ಕೃಷ್ಣ ಲಾಲ್‌ಚಂದಾನಿ ಹೇಳಿದ್ದಾರೆ

‘ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಟ್ರಕ್‌ ಚಾಲಕ ಮೊದಲಿಗೆ ರಾಮಚಂದ್ರ ನಗರ ಸಮೀಪ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬಡಾ ಗಣಪತಿ ಪ್ರದೇಶದ ಕಡೆಗೆ ಟ್ರಕ್‌ ಅನ್ನು ನುಗ್ಗಿಸಿದ್ದಾನೆ’ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ADVERTISEMENT

ಘಟನೆಯಲ್ಲಿ ಸುಮಾರು 10 ವಾಹನಗಳು ಜಖಂಗೊಂಡಿವೆ. ಮೂವರು ಸ್ಥಳದಲ್ಲಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅಪಘಾತದ ಬೆನ್ನಲ್ಲೇ ಟ್ರಕ್‌ ಚಾಲಕನನ್ನು ಬಂಧಿಸಿದ್ದು, ಮಲ್ಹರ್‌ಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಟ್ರಕ್‌ ಹರಿದ ಪರಿಣಾಮ ಶವಗಳು ಚೂರುಚೂರಾಗಿದ್ದು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೊತ್ತಿ ಉರಿದ ಟ್ರಂಕ್‌:

ಅಪಘಾತದ ಬೆನ್ನಲ್ಲೇ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೋಪಗೊಂಡ ಸ್ಥಳೀಯರು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ಈ ವರದಿಗಳನ್ನು ನಿರಾಕರಿಸಿರುವ ಸ್ಥಳೀಯರು, ಟ್ರಕ್‌ ಕೆಳಗೆ ಸಿಲುಕಿಗೊಂಡಿದ್ದ ಬೈಕ್‌ನ ಟ್ಯಾಂಕ್‌ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದಿದ್ದಾರೆ.

ಏತನ್ಮಧ್ಯೆ, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.