ADVERTISEMENT

HMP ವೈರಾಣು ಸೋಂಕು: ಅಹಮದಾಬಾದ್‌ನ ಆಸ್ಪತ್ರೆಯಲ್ಲಿ 2 ತಿಂಗಳ ಮಗುವಿನಲ್ಲಿ ಪತ್ತೆ

ಪಿಟಿಐ
Published 6 ಜನವರಿ 2025, 10:02 IST
Last Updated 6 ಜನವರಿ 2025, 10:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ 2 ತಿಂಗಳ ಮಗುವಿನಲ್ಲಿ ಹ್ಯೂಮನ್ ಮೆಟಾನ್ಯೂಮೊವೈರಸ್ (HMPV) ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಜಸ್ಥಾನದ ಡುಂಗರ್‌ಪುರ ಮೂಲದ ಈ ಮಗು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿತ್ತು. ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಡಿ. 24ರಂದು ಚಿಕಿತ್ಸೆಗೆ ಈ ಮಗುವನ್ನು ದಾಖಲಿಸಲಾಗಿತ್ತು.

ADVERTISEMENT

ತಪಾಸಣೆ ನಂತರ ಮಗುವಿನಲ್ಲಿ ಎಚ್‌ಎಂಪಿವಿ ಇರುವುದು ಪತ್ತೆಯಾಗಿತ್ತು ಎಂದು ಮಹಾನಗರ ಪಾಲಿಕೆಯ ವೈದ್ಯಕೀಯ ಅಧಿಕಾರಿ ಭವಾನಿ ಸೋಲಂಕಿ ತಿಳಿಸಿದ್ದಾರೆ.

‘ಸೋಂಕು ಇರುವುದು ಡಿ. 26ರಂದೇ ಪತ್ತೆಯಾಗಿದೆ. ಆದರೆ ಖಾಸಗಿ ಆಸ್ಪತ್ರೆಯ ವಿಳಂಬದಿಂದಾಗಿ ಇಂದು ವರದಿ ಕೈಸೇರಿದೆ. ಸೋಂಕಿತ ಮಗುವನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಇದಕ್ಕೂ ಮೊದಲು ಮಗುವನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದೆ’ ಎಂದಿದ್ದಾರೆ.

ಇದಕ್ಕೂ ಮೊದಲು ಎಚ್ಎಂಪಿವಿ ಸೋಂಕಿನ ಎರಡು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿದ್ದವು. ಎಚ್‌ಎಂಪಿವಿ ಈಗಾಗಲೇ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಇದೆ. ಹೀಗೆ ಶ್ವಾಸಕೋಶ ಸೋಂಕು ಸಂಬಂಧಿತ ಸಮಸ್ಯೆ ಭಾರತದಲ್ಲೂ ಪತ್ತೆಯಾಗಿದೆ. ವ್ಯಾಪಕವಾಗಿ ಹರಡಬಹುದಾದ ರೋಗಕಾರಕಗಳು ಅಥವಾ ತೀವ್ರವಾದ ಉಸಿರಾಟದ ಕಾಯಿಲೆ ದೇಶದಲ್ಲಿ ಪತ್ತೆಯಾಗಿಲ್ಲ ಎಂದು ಐಸಿಎಂಆರ್‌ ಮಾಹಿತಿ ನೀಡಿದೆ.

ಸದ್ಯ ಪತ್ತೆಯಾಗಿರುವ ಎಚ್‌ಎಂಪಿ ವೈರಾಣು ಸೋಂಕಿಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ನಿಗಾ ವಹಿಸಲಾಗಿದೆ. ಚೀನಾದಲ್ಲಿನ ಸದ್ಯದ ಪರಿಸ್ಥಿತಿ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಾಲಕಾಲಕ್ಕೆ ಮಾಹಿತಿ ನೀಡುತ್ತಿದೆ. ಚೀನಾದಲ್ಲಿ ಕಳೆದ ಕೆಲ ವಾರಗಳಿಂದ ಉಲ್ಬಣಗೊಳ್ಳುತ್ತಿರುವ ಉಸಿರಾಟ ಸಂಬಂಧಿತ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಭಾರತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಆರೋಗ್ಯ ಸೇವೆಗಳ ಮಹಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಂಟಿ ನಿರ್ವಹಣಾ ಸಮೂಹವು ಶನಿವಾರ ಸಭೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.