ADVERTISEMENT

ನೊಯಿಡಾದಲ್ಲಿ ಹೆಚ್ಚಿದ ಬೀದಿ ನಾಯಿಗಳ ದಾಳಿ: ಮಗು ಸಾವು, ಜನರ ಪ್ರತಿಭಟನೆ

ಪಿಟಿಐ
Published 18 ಅಕ್ಟೋಬರ್ 2022, 15:30 IST
Last Updated 18 ಅಕ್ಟೋಬರ್ 2022, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೊಯಿಡಾ: ಬೀದಿ ನಾಯಿಯ ದಾಳಿಗೆ ಒಳಗಾಗಿದ್ದ ಏಳು ತಿಂಗಳ ಹಸುಳೆ ಮಂಗಳವಾರ ಮೃತಪಟ್ಟಿದೆ. ಪ್ರತಿಷ್ಠಿತ ಲೋಟಸ್‌ ಬುಲೇವಡ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಸೋಮವಾರ ಸಂಜೆ 4.30ಕ್ಕೆ ನಡೆದಿತ್ತು. ಘಟನೆ ಕುರಿತು ಆಕ್ರೋಶಗೊಂಡ ಸ್ಥಳೀಯರು ನೊಯಿಡಾ ಪ್ರಾಧಿಕಾರದ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಮಗುವನ್ನು ತಕ್ಷಣದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರಾದೃಷ್ಟವಶಾತ್‌ ಮಗುವು ಸೋಮವಾರ ತಡರಾತ್ರಿ ತೀರಿಕೊಂಡಿತು. ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿಗಳ ಗುಂಪಿನ ಸದಸ್ಯ ಧರಂವೀರ್‌ ಯಾದವ್‌ ಮಾಹಿತಿ ನೀಡಿದರು.

‘ಮಗುವಿನ ಪೋಷಕರು ಕಟ್ಟಡ ಕಾರ್ಮಿಕರಾಗಿದ್ದಾರೆ. ತಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಮಗುವನ್ನು ಇರಿಸಿಕೊಂಡಿದ್ದರು. ಪೋಷಕರು ಕೆಲಸದಲ್ಲಿ ಮಗ್ನರಾಗಿದ್ದಾಗ ಮಗುವಿನ ಮೇಲೆ ನಾಯಿ ದಾಳಿ ನಡೆಸಿದೆ. ಪೋಷಕರಿಗೆ ನಾಲ್ಕು ಮಕ್ಕಳಿದ್ದಾರೆ. ಈ ಮಗು ಕಿರಿಯ ಮಗುವಾಗಿತ್ತು’ ಎಂದು ಸಹಾಯಕ ಪೊಲೀಸ್‌ ಆಯುಕ್ತ (ನೊಯಿಡಾ 1) ರಜನೀಶ್‌ ವರ್ಮಾ ಅವರು ತಿಳಿಸಿದರು.

ADVERTISEMENT

ಬೀದಿ ನಾಯಿಗಳ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾದ ಸ್ಥಳೀಯ ಆಡಳಿತ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದರು. ಅಪಾರ್ಟ್‌ಮೆಂಟ್‌ನ ಹೊರಡೆ ನೊಯಿಡಾ ಪ್ರಾಧಿಕಾರದ ವಿರುದ್ಧ ರಸ್ತೆ ಮೇಲೆ ಕುಳಿತ ಒಬ್ಬ ಮಹಿಳೆ ಘೋಷಣೆಗಳನ್ನು ಕೂಗಿದರು.

‘ಎರಡು ತಿಂಗಳಿಗೊಮ್ಮೆ ಘಟನೆ ಮರುಳಿಸುತ್ತಿದೆ’
‘ಬೀದಿ ನಾಯಿಗಳು ಕ್ರೂರವಾಗಿದೆ. ಈ ರೀತಿಯ ಘಟನೆಗಳು ಎರಡು ತಿಂಗಳಿಗೆ ಒಮ್ಮೆ ನಡೆಯುತ್ತಿದೆ. ಈ ಪ್ರದೇಶದಲ್ಲಿ ನಮ್ಮ ಮಕ್ಕಳು ಆಟವಾಡುತ್ತಾರೆ. ಬೀದಿ ನಾಯಿಗಳ ಕಾಟದ ಬಗ್ಗೆ ಸ್ಥಳೀಯ ಆಡಳಿತವನ್ನು ನಾವು ಎಚ್ಚರಿಸುತ್ತಲೇ ಬಂದಿದ್ದೇವೆ. ಆದರೆ ಈ ವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ಸ್ಥಳೀಯ ವಿನೋದ್‌ ಶರ್ಮಾ ತಿಳಿಸಿದರು.

‘ನಾಯಿ ಆಶ್ರಯತಾಣ ನಿರ್ಮಾಣ’
‘ನಾಲ್ಕು ನಾಯಿ ಆಶ್ರಯತಾಣಗಳನ್ನು ನಿರ್ಮಿಸುವ ಕುರಿತು ಸಿದ್ಧತೆ ನಡೆಯುತ್ತಿದೆ. ಇವುಗಳು ಇನ್ನೊಂದು ತಿಂಗಳಲ್ಲಿ ತೆರೆಯಲಿವೆ. ಇದರಿಂದ ಬೀದಿ ನಾಯಿಗಳ ಹಾವಳಿ ತಪ್ಪಲಿದೆ’ ಎಂದು ನೊಯಿಡಾ ಪ್ರಾಧಿಕಾರದ ಅಧಿಕಾರಿ ಇಂದು ಪ್ರಕಾಶ್‌ ಸಿಂಗ್‌ ತಿಳಿಸಿದರು. ‘ಬೀದಿ ನಾಯಿಗಳ ಹಾವಳಿ ಕುರಿತು ಪ್ರಾಧಿಕಾರಕ್ಕೆ ದಿನದಲ್ಲಿ 8–10 ಕರೆಗಳು ಬರುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.