
ಇನ್ಫೊಸಿಸ್ ಆರೋಹಣ ಪ್ರಶಸ್ತಿ
ಬೆಂಗಳೂರು: ‘ಭಾರತದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ನಾವಿನ್ಯತೆ ಮೂಲಕ ಸಾಮೂಹಿಕ ಪರಿಹಾರ ನೀಡುವುದು ಕಷ್ಟವಾದರೂ ಸರ್ಕಾರ ಹಾಗೂ ಸಮುದಾಯದ ಬೆಂಬಲ ದೊರೆತಾಗ ಹೆಚ್ಚು ಜನರಿಗೆ ಅದರ ಫಲ ಸಿಗಲಿದೆ’ ಎಂದು ಇನ್ಫೊಸಿಸ್ ಫೌಂಡೇಷನ್‌ನ ಸಂಸ್ಥಾಪಕಿ ಸುಧಾಮೂರ್ತಿ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ 2025ನೇ ಸಾಲಿನ ಇನ್ಪೋಸಿಸ್ ಆರೋಹಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬದಲಾವಣೆ ಎನ್ನುವುದು ಸುಲಭವಲ್ಲ. ಆದರೆ ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ನಾವಿನ್ಯತೆ ಮೂಲಕ ಹೊಸತನ ತೋರಿರುವ ಸಾಧಕರೇ ಸಾಕ್ಷಿ’ ಎಂದು ತಿಳಿಸಿದರು.
‘ಏಳು ವರ್ಷದ ಹಿಂದೆ ಇನ್ಫೋಸಿಸ್ ಫೌಂಡೇಷನ್ ಆರಂಭಿಸಿದ ಆರೋಹಣ ಪ್ರಶಸ್ತಿಯಿಂದ ಹಲವು ಪ್ರತಿಭೆಗಳ ಪರಿಚಯವಾಗಿದೆ. ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಯೋಚನೆಯಿದೆ. ಸಾಧಕರು ಇಂತಹ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಬೇಕು’ ಎಂದರು.
ಅಂಧತ್ವವನ್ನು ಮೆಟ್ಟಿ ನಿಂತ 14 ವರ್ಷದ ಪ್ರಥಮೇಶ್ ಸಿನ್ಹಾ ಮಾತನಾಡಿ, ಅಂಧತ್ವ ಎನ್ನುವುದು ಸಮಸ್ಯೆಯಲ್ಲ. ಅದನ್ನು ಒಪ್ಪಿಕೊಂಡು ನಿರಂತರ ಕಲಿಕೆ ಮೂಲಕವೇ ಆತ್ಮವಿಶ್ವಾಸ ವೃದ್ದಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರಿ ಶಾಲಾ ಮಕ್ಕಳು, ಜನಸಾಮಾನ್ಯರಿಗೆ ಮಾತ್ರವಲ್ಲದೇ ಅಂಗವಿಕಲರು, ಅಂಧರ ಬದುಕು ಸುಧಾರಿಸಲು ಸಾಮಾಜಿಕ ನಾವಿನ್ಯತೆ ರೂಪಿಸಿದವರಿಗೆ ಇನ್ಪೋಸಿಸ್ ಆರೋಹಣ ಪ್ರಶಸ್ತಿ ಮಾಡಲಾಯಿತು.
ವಿಭಿನ್ನ ನಾವಿನ್ಯತೆಗೆ ಎಂಟು ಪ್ರಶಸ್ತಿ
ಸರ್ಕಾರಿ ಶಾಲೆಗಳಲ್ಲಿ ಕನೆಕ್ಟಿಂಗ್ ದಿ ಡಾಟ್ಸ್ ಮೂಲಕ ಶಿಕ್ಷಣ ನೀಡುತ್ತಿರುವ ಬೆಂಗಳೂರಿನ ರಾಜೇಶ್ ಎ. ರಾವ್, ರವೀಂದ್ರ ಎಸ್. ರಾವ್ ಮತ್ತು ದೀಪಾ ಎಲ್.ಬಿ. ರಾಜೀವ್( ಶಿಕ್ಷಣ), ʼಕ್ಲುಯಿಕ್ಸ್ ಸಿ012ʼ ಎಂಬ ಎಐ ಆಧಾರಿತ ನೀರಿನ ಗುಣಮಟ್ಟ ಪರಿಶೀಲನಾ ಸಾಧನ ರೂಪಿಸಿದ ನವದೆಹಲಿಯ ಚಿತ್ತರಂಜನ್ ಸಿಂಗ್ ಮತ್ತು ರಾಬಿನ್ ಸಿಂಗ್( ಆರೋಗ್ಯ ಸೇವೆ) ಹಾಗೂ ರೋಬೊಟಿಕ್ ತಂತ್ರಜ್ಞಾನದ ಆಧಾರದಲ್ಲಿ ಕೊಳವೆಬಾವಿ ಮರುಪೂರಣ ಮಾಡುವ ʼಬೋರ್‌ಚಾರ್ಜರ್ʼ ರೂಪಿಸಿರುವ ಪುಣೆಯ ರಾಹುಲ್ ಸುರೇಶ್ ಬಾಕರೆ ಮತ್ತು ವಿನೀತ್ ಮೋರೇಶ್ವರ ಫಡ್ನಿಸ್( ಪರಿಸರ ಸುಸ್ಥಿರ) ಅವರಿಗೆ ₹50 ಲಕ್ಷ ನಗದಿನೊಂದಿಗೆ ಪ್ರಶಸ್ತಿ ಪಡೆದುಕೊಂಡರು.
ಬೆಂಗಳೂರಿನ ನಾಗರಾಜನ್ ರಾಜಗೋಪಾಲ್, ವಿದ್ಯಾ ವೈ ಮತ್ತು ಸುಪ್ರಿಯಾ ಡೇ ಅವರು ಅಭಿವೃದ್ದಿಪಡಿಸಿರುವ ದೃಷ್ಟಿದೋಷದ ವಿದ್ಯಾರ್ಥಿಗಳಿಗೆ ಸಮಗ್ರವಾದ ಕಲಿಕಾ ವ್ಯವಸ್ಥೆ, ಅಂಧರಾದ ಪುಣೆಯ ಸೌಮ್ಯಾ ಎಸ್. ಮತ್ತು ಪಲ್ಲವಿ ಕುಲಕರ್ಣಿ ರೂಪಿಸಿರುವ ತಂತ್ರಜ್ಞಾನ ಆಧರಿತ ಪ್ರಾಜೆಕ್ಟ್ ಬಿಂದು(ಶಿಕ್ಷಣ), ಪುಣೆಯ ಫಲ್ಗುಣ ಮುಕೇಶ್ ವ್ಯಾಸ್ ಅಭಿವೃದ್ದಿಪಡಿಸಿರುವ ಸುಕೂನ್ ಎನ್ನುವ ಡಿಜಿಟಲ್ ಹೈಬ್ರಿಡ್-ಐಡಿಇಸಿ ವ್ಯವಸ್ಥೆ, ವಡೋದರಾದ ಅನಿರ್ಬಾನ್ ಪಲಿತ್ ಮತ್ತು ಡಾ. ಸಾಯಂತಾನಿ ಪ್ರಮಾಣಿಕ್ ಮತ್ತು ಪಲ್ನಾ ಪಟೇಲ್ ಅಭಿವೃದ್ದಿಪಡಿಸಿರುವ ಔಷಧ ಗುಣಮಟ್ಟ ನಿಯಂತ್ರಣ ಉಪಕರಣ(ಆರೋಗ್ಯ), ಪುಣೆಯ ನೇಹಾ ಪಂಚಮಿಯಾ ಮತ್ತು ನಚಿಕೇತ್ ಉತ್ಪತ್ ಅಭಿವೃದ್ಧಿಪಡಿಸಿರುವ ವನ್ಯಜೀವಿಗಳ ಒನ್ ಹೆಲ್ತ್ʼ ಹೆಸರಿನ ಆ್ಯಪ್(ಪರಿಸರ ಸುಸ್ಥಿರತೆ) ತಲಾ ₹10 ಲಕ್ಷ ನಗದಿನೊಂದಿಗೆ ಪ್ರಶಸ್ತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.