ADVERTISEMENT

ವಿದ್ಯಾರ್ಥಿ ಸಂಘದ ಚುನಾವಣೆ: ಜೆಎನ್‌ಯುನಲ್ಲಿ ಎಬಿವಿಪಿ–ಎಸ್‌ಎಫ್ಐ ನಡುವೆ ಮಾರಾಮಾರಿ

ಪಿಟಿಐ
Published 10 ಫೆಬ್ರುವರಿ 2024, 4:46 IST
Last Updated 10 ಫೆಬ್ರುವರಿ 2024, 4:46 IST
<div class="paragraphs"><p>ಎಡ–ಬಲ ಗುಂಪುಗಳ ನಡುವೆ ಗದ್ದಲ</p></div>

ಎಡ–ಬಲ ಗುಂಪುಗಳ ನಡುವೆ ಗದ್ದಲ

   

X/@SfiDelhi

ನವದೆಹಲಿ: ವಿದ್ಯಾರ್ಥಿ ಸಂಘದ ಚುನಾವಣೆ ಕುರಿತಂತೆ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಬಿವಿಪಿ ಮತ್ತು ಎಡ ಬೆಂಬಲಿತ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ADVERTISEMENT

ಎರಡು ಕಡೆಯವರು ತಮ್ಮ ಎದುರಾಳಿ ಗುಂಪುನ್ನು ಘರ್ಷಣೆಗೆ ಕಾರಣವೆಂದು ದೂಷಿಸಿದ್ದು, ಘರ್ಷಣೆ ಕುರಿತಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

‘ಜೆಎನ್‌ಯುಎಸ್‌ಯು(ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ) ಚುನಾವಣೆಗೆ ಚುನಾವಣಾ ಆಯೋಗದ ಸದಸ್ಯರನ್ನು ಆಯ್ಕೆ ಮಾಡಲು ಕ್ಯಾಂಪಸ್‌ನಲ್ಲಿರುವ ಸಬರಮತಿ ಡಾಬಾದಲ್ಲಿ ವಿಶ್ವವಿದ್ಯಾನಿಲಯದ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಎಬಿವಿಪಿ ಸದಸ್ಯರು ಅಡ್ಡಿಪಡಿಸಿದ್ದರು’ ಎಂದು ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಫೆಡರೇಷನ್‌(ಡಿಎಸ್‌ಎಫ್‌) ಆರೋಪಿಸಿದೆ.

‘ಎಬಿವಿಪಿಯ ಜೆಎನ್‌ಯು ಕಾರ್ಯದರ್ಶಿ ವಿಕಾಸ್ ಪಟೇಲ್ ಮೇಲೆ ಡಿಎಸ್‌ಎಫ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಲ್ಲದೆ, ಇನ್ನೊಬ್ಬ ವಿದ್ಯಾರ್ಥಿ ಪ್ರಶಾಂತೋ ಬಾಗ್ಚಿಗೆ ಥಳಿಸಲಾಗಿದೆ. ಎಂಎ ಅಂತಿಮ ವರ್ಷದ ವಿದ್ಯಾರ್ಥಿ ಪ್ರಫುಲ್ಲ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಎಡ ಬೆಂಬಲಿತ ಸಂಘಟನೆಗಳಿಂದಲೇ(ಎಐಎಸ್‌ಎ, ಎಸ್‌ಎಫ್‌ಐ, ಡಿಎಸ್‌ಎಫ್ ) ಸಭೆಗೆ ಅಡ್ಡಿಯಾಗಿದೆ ’ ಎಂದು ಎಬಿವಿಪಿ ಆರೋಪಿಸಿದೆ.

‘ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಶೆ ಘೋಷ್ ಮೇಲೆ ಎಬಿವಿಪಿ ಸದಸ್ಯರು ಹಲ್ಲೆ ನಡೆಸಿದ್ದಲ್ಲದೆ, ಗದ್ದಲದ ಸಮಯದಲ್ಲಿ ಅವರ ಮೇಲೆ ನೀರು ಸುರಿದಿದ್ದಾರೆ’ ಎಂದು ಸ್ಟೂಡೆಂಟ್‌ ಫೆಡರೇಶನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಐಶೆ ಘೋಷ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗದ್ದಲದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಗುಂಪುಗಳ ನಡುವಿನ ವಾಗ್ವಾದ ಬಿಡಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಘರ್ಷಣೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.