ADVERTISEMENT

ಉದ್ದಿಮೆ ವೈಫಲ್ಯ ಅವಮಾನವಲ್ಲ: ದಿವಾಳಿ ಸಂಹಿತೆ ತಿದ್ದುಪಡಿ ಸಮರ್ಥಿಸಿಕೊಂಡ ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:32 IST
Last Updated 1 ಆಗಸ್ಟ್ 2019, 19:32 IST
   

ನವದೆಹಲಿ: ‘ಉದ್ದಿಮೆ ವಹಿವಾಟಿನಲ್ಲಿನ ವೈಫಲ್ಯವನ್ನು ಕೀಳಾಗಿ ಕಾಣ ಬಾರದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕೆಫೆ ಕಾಫಿ ಡೇ ಸ್ಥಾಪಕ ವಿ. ಜಿ. ಸಿದ್ಧಾರ್ಥ ಅವರ ಸಾವಿಗೆ ಪ್ರತಿಕ್ರಿಯಿಸುತ್ತಿದ್ದ ಅವರು, ‘ಉದ್ದಿಮೆದಾರರು ವಹಿವಾಟಿನಲ್ಲಿ ವೈಫಲ್ಯ ಕಂಡರೆ ಗೌರವಾನ್ವಿತ ರೀತಿಯಲ್ಲಿ ಹೊರ ನಡೆಯಬೇಕು. ದಿವಾಳಿ ಸಂಹಿತೆಯಡಿ (ಐಬಿಸಿ) ಪರಿಹಾರ ಕಂಡುಕೊಳ್ಳಬೇಕು. ವಹಿವಾಟು ವೈಫಲ್ಯವು ಕಳಂಕವೇನೂ ಅಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಇಲಾಖೆಯು ತಮಗೆ ಕಿರುಕುಳ ನೀಡಿತ್ತು. ಸಾಲಗಾರರು ಮತ್ತು ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಒತ್ತಾಯಿಸಿದ್ದವು ಎಂದು ಸಿದ್ಧಾರ್ಥ ಅವರು ಬರೆದಿರುವರು ಎನ್ನಲಾದ ಪತ್ರದಲ್ಲಿ ಆರೋಪಿಸಲಾಗಿದೆ. ಇಲಾಖೆಯು ಈ ಆರೋಪವನ್ನು ತಳ್ಳಿಹಾಕಿತ್ತು.

ADVERTISEMENT

‘ಕುಂಠಿತ ಆರ್ಥಿಕತೆ ಅಥವಾ ವಹಿವಾಟಿನ ಏರಿಳಿತದಿಂದಾಗಿ ಉದ್ದಿಮೆಗಳು ವಿಫಲಗೊಳ್ಳುತ್ತವೆ. ಸಾಲ ನೀಡುವ ಬ್ಯಾಂಕ್‌ಗಳ ವಿಶ್ವಾಸಾರ್ಹತೆಯನ್ನೂ ಪರಾಮರ್ಶೆಗೆ ಒಳಪಡಿಸಬೇಕಾಗಿದೆ’ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಟಿಡಿಪಿ ಸಂಸದ ಜಯದೇವ ಗಲ್ಲಾ ಹೇಳಿದರು. ಬ್ಯಾಂಕ್‌ಗಳಿಂದ ಸಾಲ ಪಡೆದವರು ಮರುಪಾವತಿ ಮಾಡಲೇಬೇಕು ಎಂದು ‘ಟಿಎಂಸಿ’ಯ ಕಲ್ಯಾಣ್‌ ಬ್ಯಾನರ್ಜಿ ಅಭಿಪ್ರಾಯಪಟ್ಟರು.

ನೀತಿ ಸಂಹಿತೆ ಸಮರ್ಥನೆ: ದಿವಾಳಿ ಸಂಹಿತೆಗೆ ತಿದ್ದುಪಡಿ ತಂದಿರುವುದು ಹೆಚ್ಚು ಸಕಾಲಿಕವಾಗಿದ್ದು, 330 ದಿನಗಳಲ್ಲಿ ಸಾಲ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ನೆರವಾಗಲಿದೆ ಎಂದು ನಿರ್ಮಲಾ ಸಮರ್ಥಿಸಿ ಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.