ADVERTISEMENT

ಮಿಜೋರಾಂ ಟ್ರಾಫಿಕ್‌: ಶಿಸ್ತಲ್ಲಿ ನಿಂತ ವಾಹನಗಳು, 'ಸ್ಫೂರ್ತಿದಾಯಕ'ವೆಂದ ಮಹೀಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2022, 9:11 IST
Last Updated 1 ಮಾರ್ಚ್ 2022, 9:11 IST
ಸಂದೀಪ್‌ ಅಹ್ಲವತ್‌ ಟ್ವೀಟ್‌ ಮಾಡಿರುವ ಮಿಜೋರಾಂ ರಸ್ತೆಯೊಂದರ ಟ್ರಾಫಿಕ್‌ ಚಿತ್ರ (ಚಿತ್ರ ಕೃಪೆ: @Sandeep Ahlawat)
ಸಂದೀಪ್‌ ಅಹ್ಲವತ್‌ ಟ್ವೀಟ್‌ ಮಾಡಿರುವ ಮಿಜೋರಾಂ ರಸ್ತೆಯೊಂದರ ಟ್ರಾಫಿಕ್‌ ಚಿತ್ರ (ಚಿತ್ರ ಕೃಪೆ: @Sandeep Ahlawat)   

ಬೆಂಗಳೂರು: ಮಿಜೋರಾಂನ ಟ್ರಾಫಿಕ್‌ ಸಿಗ್ನಲ್‌ ಒಂದರಲ್ಲಿ ಶಿಸ್ತಾಗಿ ನಿಂತಿರುವ ವಾಹನಗಳ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಮಹೀಂದ್ರಾ ಚೇರ್ಮನ್‌ ಆನಂದ್‌ ಮಹೀಂದ್ರಾ ಅವರು 'ಸ್ಫೂರ್ತಿದಾಯಕ' ಎಂದು ಶ್ಲಾಘಿಸಿದ್ದಾರೆ.

ಸಂದೀಪ್‌ ಅಹ್ಲವತ್‌ ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಈ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ. 'ಇಂತಹ ಶಿಸ್ತನ್ನು ಕೇವಲ ಮಿಜೋರಾಂನಲ್ಲಿ ಮಾತ್ರ ನೋಡಿದ್ದೇನೆ. ಇಲ್ಲಿ ಫ್ಯಾನ್ಸಿ ಕಾರುಗಳಿಲ್ಲ, ಅಹಂಕಾರಿಗಳಿಲ್ಲ, ಕೋಪೋದ್ರೇಕಗೊಳ್ಳುವವರಿಲ್ಲ, ಹಾರ್ನ್‌ ಮಾಡುವವರಿಲ್ಲ ಮತ್ತು ನನ್ನ ಅಪ್ಪ ಯಾರೆಂದು ನಿನಗೆ ಗೊತ್ತಾ? ಎಂದು ಕೂಗಾಡುವವರಿಲ್ಲ. ಯಾರೊಬ್ಬರೂ ಅವಸರಿಸುತ್ತಿಲ್ಲ. ರಸ್ತೆಯುದ್ದಕ್ಕೂ ಶಾಂತಿಯಿಂದ ಕೂಡಿದ್ದು, ಸುತ್ತಲೂ ಪ್ರಶಾಂತತೆಯ ವಾತಾವರಣವಿದೆ' ಎಂದು ಸಂದೀಪ್‌ ತಮ್ಮ ಅನುಭವವನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಂದೀಪ್‌ ಅವರ ಪೋಸ್ಟ್‌ಅನ್ನು ರೀಟ್ವೀಟ್‌ ಮಾಡಿರುವ ಆನಂದ್‌ ಮಹೀಂದ್ರಾ ಅವರು ಅದ್ಭುತವಾದ ದೃಶ್ಯ ಎಂದು ಪ್ರಶಂಸಿದ್ದಾರೆ. ರಸ್ತೆಯ ಮಧ್ಯೆಗೆರೆಯಿಂದ ಹೊರಗೆ ಯಾರೊಬ್ಬರೂ ಕಾಲಿರಿಸದಿರುವುದನ್ನೂ ಗಮನಿಸಿರುವ ಮಹೀಂದ್ರ ಅವರು 'ಸ್ಫೂರ್ತಿದಾಯಕವಾಗಿದೆ ಮತ್ತು ಪ್ರಬಲ ಸಂದೇಶವನ್ನು ರವಾನಿಸುತ್ತಿದೆ' ಎಂದಿದ್ದಾರೆ.

ADVERTISEMENT

'ನಮ್ಮ ಜೀವನದ ಗುಣಮಟ್ಟವನ್ನು ಹೇಗೆ ಅಭಿವೃದ್ಧಿಗೊಳಿಸಿಕೊಳ್ಳಬಹುದು ಎಂಬುದು ನಮ್ಮ ಮೇಲೆಯೇ ಅವಲಂಬಿತವಾಗಿದೆ. ರಸ್ತೆ ನಿಯಮಗಳನ್ನು ಪಾಲಿಸಿ. ಮಿಝೋರಂಗೆ ದೊಡ್ಡ ಚಪ್ಪಾಳೆ' ಎಂದು ಆನಂದ್‌ ಮಹೀಂದ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.