ADVERTISEMENT

ವಿಮೆ ಪಾಲಿಸಿ ಸಕ್ರಿಯವಾಗಿ ಇಲ್ಲದಿದ್ದರೆ ಕ್ಲೇಮ್‌ ತಿರಸ್ಕರಿಸಬಹುದು: ಸುಪ್ರೀಂ

ಪಿಟಿಐ
Published 1 ನವೆಂಬರ್ 2021, 12:58 IST
Last Updated 1 ನವೆಂಬರ್ 2021, 12:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ : ಪ್ರೀಮಿಯಂ ಪಾವತಿಸದ ಕಾರಣ ಪಾಲಿಸಿ ಸಕ್ರಿಯವಾಗಿ ಇಲ್ಲದಿದ್ದಲ್ಲಿ ವಿಮೆ ಕ್ಲೇಮು ತಿರಸ್ಕರಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಪಾಲಿಸಿ ನಿಬಂಧನೆಗಳ ಕಟ್ಟುನಿಟ್ಟಿನ ವ್ಯಾಖ್ಯಾನ ಅಗತ್ಯವಿದೆ ಎಂದೂ ಕೋರ್ಟ್‌ ಹೇಳಿದೆ.

ರಸ್ತೆ ಅಪಘಾತ ಪ್ರಕರಣದಲ್ಲಿ ಖಾತರಿ ನೀಡಿದ್ದಂತೆ ಹೆಚ್ಚುವರಿ ಪರಿಹಾರ ವಿತರಿಸಲು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ನೀಡಿದ್ದ ಆದೇಶವನ್ನು ಕೋರ್ಟ್‌ ಇದೇ ಸಂದರ್ಭದಲ್ಲಿ ಅಸಿಂಧುಗೊಳಿಸಿತು.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಬೆಲಾ ಎಂ. ತ್ರಿವೇದಿ ಅವರಿದ್ದ ನ್ಯಾಯಪೀಠವು, ‘ವಿಮೆ ಪ್ರಕರಣದಲ್ಲಿ ಭದ್ರತೆಗೆ ಒಳಪಡಲು ಉತ್ತಮ ನಂಬಿಕೆಯೂ ಅಗತ್ಯ. ಕಾನೂನು ಕ್ರಮ ಇಲ್ಲಿ ವ್ಯವಸ್ಥಿತವಾಗಿದೆ’ ಎಂದು ಹೇಳಿತು.

ADVERTISEMENT

ವಿಮೆ ಒಪ್ಪಂದದಲ್ಲಿರುವ ನಿಯಮಗಳಿಗೆ ಕಡ್ಡಾಯವಾಗಿ ಬದ್ಧರಾಗಬೇಕು ಎಂಬುದು ಸ್ಪಷ್ಟ. ನಿಬಂಧನೆಗಳನ್ನು ವ್ಯಾಖ್ಯಾನ ಮಾಡುವಾಗ ಒಪ್ಪಂದದ ನಿಯಮಗಳನ್ನು ಪರಿಷ್ಕರಿಸುವುದಕ್ಕೆ ಅನುಮತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಎನ್‌ಸಿಡಿಆರ್‌ಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತೀಯ ಜೀವವಿಮಾ ನಿಗಮ ಅರ್ಜಿ ಸಲ್ಲಿಸಿತ್ತು. ಉಲ್ಲೇಖಿತ ಪ್ರಕರಣದಲ್ಲಿ ಮಹಿಳೆಯ ಪತಿ ಜೀವನ್‌ ಸುರಕ್ಷಾ ಯೋಜನೆಯಡಿ ವಿಮೆ ಪಾಲಿಸಿ ಪಡೆದಿದ್ದು, ನಿಗಮವು ₹3.75 ಲಕ್ಷದ ಖಾತರಿನೀಡಿತ್ತು. ಅಲ್ಲದೆ ಅಪಘಾತದಲ್ಲಿ ಸಾವು ಸಂಭವಿಸಿದ್ದಲ್ಲಿ ಹೆಚ್ಚುವರಿ ₹3.75 ಲಕ್ಷ ನೀಡುವ ಖಾತರಿ ನೀಡಿತ್ತು. ಆರು ತಿಂಗಳಿಗೆ ಒಮ್ಮೆ ಪ್ರೀಮಿಯಂ ಪಾವತಿಸಬೇಕಿದ್ದು, ಬಾಕಿ ಉಳಿದಿತ್ತು. ಪತಿ ಅಪಘಾತದಿಂದ ಮಾರ್ಚ್ 21, 2012ರಂದು ಮೃತಪಟ್ಟಿದ್ದರು.

ನಿಗಮವು ವಿಮೆ ಮೊತ್ತವಾಗಿ ₹ 3.75 ಲಕ್ಷ ಪಾವತಿಸಿದ್ದರೂ, ಹೆಚ್ಚುವರಿಯಾಗಿ ಖಾತರಿ ನೀಡಿದ್ದ ಮೊತ್ತ ನೀಡಲು ನಿರಾಕರಿಸಿತ್ತು. ಇದರ ವಿರುದ್ಧ ಅರ್ಜಿದಾರರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದು, ಕೇಂದ್ರವು ಇವರ ಪರವಾಗಿ ತೀರ್ಪು ನೀಡಿತ್ತು. ನಿಗಮ ಇದನ್ನು ಪ್ರಶ್ನಿಸಿದ್ದು, ಪ್ರಕರಣ ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಅಪಘಾತವಾದ ಸಂದರ್ಭದಲ್ಲಿ ಪಾಲಿಸಿ ಸಕ್ರಿಯವಾಗಿರಬೇಕು ಎಂಬ 11ನೇ ಸಂಖ್ಯೆಯ ಷರತ್ತು ಪಾಲನೆಯಾಗಿಲ್ಲ ಎಂಬುದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಗ್ರಾಹಕ ವ್ಯಾಜ್ಯ ಪರಿಹಾರ ಕೇಂದ್ರದ ಆದೇಶವನ್ನು ಅನೂರ್ಜಿತಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.