ADVERTISEMENT

ಕಾಶ್ಮೀರದಲ್ಲಿ ಕನಿಷ್ಠ ತಾಪಮಾನ ಮೈನಸ್‌ 5.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ!

ಪಿಟಿಐ
Published 25 ಜನವರಿ 2021, 8:29 IST
Last Updated 25 ಜನವರಿ 2021, 8:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸೋಮವಾರ ಕನಿಷ್ಠ ತಾಪಮಾನ ಮೈನಸ್‌ 5.2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಇದರಿಂದಾಗಿ ಇಲ್ಲಿ ಶೀತಗಾಳಿಯ ಸ್ಥಿತಿಯು ಇನ್ನಷ್ಟು ತೀವ್ರಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಶ್ರೀನಗರದಲ್ಲಿ ಭಾನುವಾರ ರಾತ್ರಿ ಕನಿಷ್ಠ ತಾಪಮಾನವು ಮೈನಸ್‌ 1.9 ಡಿಗ್ರಿ ಸೆಲ್ಸಿಯಸ್‌ ಇತ್ತು. ಭಾನುವಾರ ರಾತ್ರಿ ಖಾಜಿಗುಂಡ್‌ನಲ್ಲಿ ಕನಿಷ್ಠ ಉಷ್ಣಾಂಶವು ಮೈನಸ್‌ 3.0 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಸೋಮವಾರ ಬೆಳಿಗ್ಗೆ ಉಷ್ಣಾಂಶವು ಮೈನಸ್‌ 5.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ’ ಎಂದು ಅವರು ಹೇಳಿದರು.

ಬಾರಾಮುಲ್ಲಾ ಜಿಲ್ಲೆ ಗುಲ್ಮಾರ್ಗ್‌ನಲ್ಲಿ ಕನಿಷ್ಠ ತಾಪಮಾನವು ಮೈನಸ್‌ 11.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಕುಪ್ವಾರದಲ್ಲಿ ಮೈನಸ್‌ 3.1 ಮತ್ತು ಕೋಕರ್ನಾಗ್‌ನಲ್ಲಿ ಮೈನಸ್‌ 8.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ADVERTISEMENT

ದೆಹಲಿಯಲ್ಲೂ ಶೀತಗಾಳಿ

ದೆಹಲಿಯಲ್ಲಿ ಮುಂದಿನ ಎರಡು-ಮೂರು ದಿನಗಳಲ್ಲಿ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ. ಹಾಗಾಗಿ ನಗರದಲ್ಲಿ ಶೀತಗಾಳಿಯ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ.

‘ಗರಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು. ಆದರೆ ಈ ಸಮಯದಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಕಂಡುಬರಬಹುದು’ ಎಂದು ಐಎಂಡಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಕುಲ್‌ದೀಪ್‌ ಶ್ರೀವಾಸ್ತವ್‌ ಅವರು ಮಾಹಿತಿ ನೀಡಿದರು. ಸೋಮವಾರ ಇಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.