ADVERTISEMENT

ಕಾಶ್ಮೀರ ಕಣಿವೆಯಲ್ಲಿ ಮುಂದುವರೆದ ಹಿಮ; ವಿಮಾನಗಳ ಹಾರಾಟ ರದ್ದು

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 14:01 IST
Last Updated 5 ಜನವರಿ 2022, 14:01 IST
ಪ್ರಾತಿನಿಧಿಕ ಚಿತ್ರ (ಐಎಎನ್‌ಎಸ್ ಚಿತ್ರ)
ಪ್ರಾತಿನಿಧಿಕ ಚಿತ್ರ (ಐಎಎನ್‌ಎಸ್ ಚಿತ್ರ)   

ಶ್ರೀನಗರ: ಕಾಶ್ಮೀರ ಕಣಿವೆಯ ಬಹುತೇಕ ಪ್ರದೇಶಗಳಲ್ಲಿ ಹಿಮ ಹಾಗೂ ಆಗಾಗ ಮಳೆ ಸುರಿಯುತ್ತಿರುವ ಪರಿಣಾಮ ಕಾಶ್ಮೀರದಲ್ಲಿ ಬುಧವಾರವೂ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಿಮ ಬೀಳುತ್ತಿರುವ ಪರಿಣಾಮ ಕಣಿವೆಯಾದ್ಯಂತ ಕನಿಷ್ಠ ತಾಪಮಾನ ಮುಂದುವರೆದಿದೆ. ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ವಾಹನಗಳ ಓಡಾಟ ವಿರಳವಾಗಿತ್ತು.

ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಬಂದಿದ್ದ ನೂರಾರು ಪ್ರವಾಸಿಗರು ತಮ್ಮ ಸ್ವಸ್ಥಾನಗಳಿಗೆ ಮರಳಲು ಸಾಧ್ಯವಾಗದೇ ಕಳೆದ ಎರಡು ದಿನಗಳಿಂದ ಕಣಿವೆಯಲ್ಲಿ ಸಿಲುಕಿಕೊಂಡಿದ್ದಾರೆ.

ADVERTISEMENT

‘ಹವಾಮಾನ ವೈಪರಿತ್ಯದಿಂದಾಗಿ ಬುಧವಾರ ಮಧ್ಯಾಹ್ನದವರೆಗೂ ಶ್ರೀನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಸಾಧ್ಯವಾಗಲಿಲ್ಲ. ವಾಯುಸಂಚಾರ ಪುನರಾರಂಭವು ಹವಾಮಾನ ಪರಿಸ್ಥಿತಿಯನ್ನು ಅವಲಂಬಿಸಿದೆ’ ಎಂದು ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಣಿವೆಯ ಬಹುತೇಕ ಪ್ರದೇಶಗಳಲ್ಲಿ ನಿರಂತರ ಹಿಮ ಬೀಳುತ್ತಿದೆ. ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯು ಬುಧವಾರದ ಮಧ್ಯಾಹ್ನದವರೆಗೆ ಸಂಚಾರಕ್ಕೆ ಮುಕ್ತವಾಗಿತ್ತು. ಹಿಮ ಕುಸಿತದ ಹಾಗೂ ಹಿಮಪಾತ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.