
ವಲಸೆ
(ಸಾಂದರ್ಭಿಕ ಚಿತ್ರ)
ಪ್ರತಿ ವರ್ಷ ಡಿಸೆಂಬರ್ 18ರಂದು 'ಅಂತರರಾಷ್ಟ್ರೀಯ ವಲಸಿಗರ ದಿನ'ವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ವಾಸಿಸುವ ವಲಸಿಗರ ಕೊಡುಗೆಗಳನ್ನು ಗೌರವಿಸುವುದು, ವಲಸಿಗರ ಹಕ್ಕುಗಳು ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
'ವಲಸೆ' ಜೀವ ವಿಕಾಸದಷ್ಟೇ ಹಳೆಯದು. ಶಿಕ್ಷಣ, ಉದ್ಯೋಗ, ಆಂತರಿಕ ಬಿಕ್ಕಟ್ಟು, ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಗಾಗಿ ಹಳ್ಳಿಯಿಂದ ನಗರಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ವಲಸೆ ಹೋಗುತ್ತಾರೆ.
ಜಾಗತಿಕ ಮಟ್ಟದಲ್ಲಿ ವಲಸಿಗರ ಸಂಖ್ಯೆ ದೊಡ್ಡದಾಗಿದ್ದು, ವರ್ಷದಿಂದ ವರ್ಷಕ್ಕೆ ಅವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ಜಾಗತಿಕ ಮಟ್ಟದಲ್ಲಿ ವಲಸೆಗೆ ಬಹಳ ದೊಡ್ಡ ಕಾರಣವಾಗಿದೆ. ಇವುಗಳ ಜತೆಗೆ ರಾಜಕೀಯ ಅಧಿಕಾರ, ಅಸಮರ್ಥ ಸರ್ಕಾರಗಳು, ಆಹಾರ ಉತ್ಪಾದನೆಯ ಜಾಗತೀಕರಣ ಮತ್ತು ಇತರ ಸಾಮಾಜಿಕ ಅಂಶಗಳೂ ದೊಡ್ಡ ಮಟ್ಟದ ವಲಸೆಗೆ ಕಾರಣವಾಗಿವೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ (ಐಒಎಂ) ‘ವಿಶ್ವ ವಲಸೆ ವರದಿ– 2024’ ಉಲ್ಲೇಖಿಸಿದೆ.
ಉತ್ತಮ ಉದ್ಯೋಗ ಮತ್ತು ಹೆಚ್ಚಿನ ಸಂಬಳ
ಉನ್ನತ ಶಿಕ್ಷಣ
ಯುದ್ಧ, ಅಶಾಂತಿ, ಹಿಂಸಾಚಾರ
ಬಡತನ ಮತ್ತು ನಿರುದ್ಯೋಗ
ಉತ್ತಮ ಆರೋಗ್ಯ ಮತ್ತು ಜೀವನಮಟ್ಟ
ಮಾನವ ಹಕ್ಕುಗಳು ಮತ್ತು ಭದ್ರತೆ
ವಿಶ್ವಸಂಸ್ಥೆಯ ಪ್ರಕಾರ, ಸುಮಾರು 27.2 ಕೋಟಿ (272 ಮಿಲಿಯನ್) ಜನರು ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಯಾವ ದೇಶದ ಜನರು ಹೆಚ್ಚಾಗಿ ತಮ್ಮ ದೇಶವನ್ನು ತೊರೆಯುತ್ತಿದ್ದಾರೆ ಮತ್ತು ಭಾರತ ಎಷ್ಟನೇ ಸ್ಥಾನದಲ್ಲಿ ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ.
ಭಾರತೀಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಜಾಗತಿಕ ಹೆಚ್ಚು ಬೇಡಿಕೆಯಿದೆ. ಹೀಗಾಗಿ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ. 2ನೇ ಸ್ಥಾನದಲ್ಲಿ ಮೆಕ್ಸಿಕೋ ಇದೆ. ಸುಮಾರು 11.2 ಮಿಲಿಯನ್ ನಾಗರಿಕರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ.
ರಷ್ಯಾ (18 ಮಿಲಿಯನ್) ಮತ್ತು ಚೀನಾ (15 ಮಿಲಿಯನ್) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಬಾಂಗ್ಲಾದೇಶ (7.8 ಮಿಲಿಯನ್), ಫಿಲಿಪ್ಪೀನ್ಸ್ (6.5 ಮಿಲಿಯನ್), ಉಕ್ರೇನ್ (6.1 ಮಿಲಿಯನ್), ಪಾಕಿಸ್ತಾನ (6.0 ಮಿಲಿಯನ್), ಇಂಡೋನೇಷ್ಯಾ (4.5 ಮಿಲಿಯನ್) ಮತ್ತು ನೈಜೀರಿಯಾ (2 ಮಿಲಿಯನ್) ಜನರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಪೌರತ್ವ ತ್ಯಜಿಸುವವರ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ. ಪ್ರತಿ ವರ್ಷ ಸುಮಾರು 2, 00,000 ಭಾರತೀಯರು ತಮ್ಮ ಪೌರತ್ವ ತ್ಯಜಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ಸುಮಾರು 9,00,000 ಜನರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ,
ಇದಕ್ಕೆ ಮುಖ್ಯಕಾರಣ ಕಾರಣ ಉತ್ತಮ ಜೀವನ ಮಟ್ಟ, ಹೆಚ್ಚಿನ ಸಂಬಳದ ಉದ್ಯೋಗಗಳು, ಉನ್ನತ ಶಿಕ್ಷಣ ಮತ್ತು ವಿದೇಶಗಳಲ್ಲಿ ಲಭಿಸುತ್ತಿರುವ ಸಂಶೋಧನಾ ಅವಕಾಶಗಳು ಎಂದು ವರದಿಯಾಗಿದೆ.
ಸರ್ಕಾರಿ ಅಂಕಿ–ಅಂಶಗಳ ಪ್ರಕಾರ, 2011 ಮತ್ತು 2024ರ ನಡುವೆ 2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ವಿದೇಶಕ್ಕೆ ವಲಸೆ ಹೋಗಿದ್ದಾರೆ. 2022ರಲ್ಲಿ ದಾಖಲೆಯ ಪ್ರಕಾರ 2,25,000 ಜನ ಮತ್ತು 2023ರಲ್ಲಿ 2,16,000 ಮಂದಿ ದೇಶದ(ಭಾರತ) ಪೌರತ್ವ ತ್ಯಜಿಸಿದ್ದಾರೆ.
ವಿಶ್ವದಲ್ಲಿ ಅತಿ ಹೆಚ್ಚು ವಲಸಿಗರನ್ನು ಹೊಂದಿರುವ ಪ್ರಮುಖ 10 ದೇಶಗಳು
ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವದಲ್ಲೇ ಅತಿ ಹೆಚ್ಚು ವಲಸಿಗರನ್ನು(52.4 ಮಿಲಿಯನ್) ಹೊಂದಿದೆ. ಇವರರಲ್ಲಿ , ಮೆಕ್ಸಿಕೊದ ಜನರೇ ಹೆಚ್ಚಿದ್ದಾರೆ. ನಂತರದ ಸ್ಥಾನದಲ್ಲಿ ಭಾರತೀಯರಿದ್ದಾರೆ.
ಜರ್ಮನಿಯು ಸುಮಾರು 16.8 ಮಿಲಿಯನ್ ವಲಸಿಗರನ್ನು ಹೊಂದಿದೆ. ಹೆಚ್ಚಿನ ಪಾಲು ಟರ್ಕಿಯ ಜನರಿದ್ದಾರೆ. ನಂತರದಲ್ಲಿ ಉಕ್ರೇನ್, ಸಿರಿಯನ್, ರೊಮೇನಿಯನ್, ಇಟಾಲಿಯನ್ ಮತ್ತು ಅಫ್ಗಾನ್ ಮೂಲದವರಾಗಿದ್ದಾರೆ.
2024-25ರ ಹೊತ್ತಿಗೆ ಸೌದಿ ಅರೇಬಿಯಾದಲ್ಲಿ ಸುಮಾರು 13.7 ಮಿಲಿಯನ್ ವಲಸಿಗರಿದ್ದಾರೆ. ಅವರಲ್ಲಿ ಹೆಚ್ಚಿನವರು , ಬಾಂಗ್ಲಾದೇಶದವರು (2.12 ಮಿಲಿಯನ್ ). ನಂತರದ ಸ್ಥಾನದಲ್ಲಿ ಭಾರತೀಯರು ಮತ್ತು ಪಾಕಿಸ್ತಾನದ ಜನರಿದ್ದಾರೆ. ಆ ಬಳಿಕ ಯೆಮೆನ್, ಈಜಿಪ್ಟ್, ಸುಡಾನ್ ಮತ್ತು ಫಿಲಿಪ್ಪೀನ್ಸ್ ಜನರು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 11.8 ಮಿಲಿಯನ್ ವಲಸಿಗರಿದ್ದಾರೆ.
ಫ್ರಾನ್ಸ್ 9.2 ಮಿಲಿಯನ್ ವಲಸಿಗರನ್ನು ಹೊಂದಿದೆ, ಅವರಲ್ಲಿ ಸುಮಾರು ಅರ್ಧದಷ್ಟು ಜನರು ಆಫ್ರಿಕಾದಿಂದ ಬಂದವರು.
ಸ್ಪೇನ್‌ನಲ್ಲಿ 8.9 ಮಿಲಿಯನ್ ವಲಸಿಗರಿದ್ದಾರೆ. ಅವರಲ್ಲಿ ಹೆಚ್ಚಿನವರು ಮೊರೊಕ್ಕೊದವರು. ಉಳಿದವರು ಕೊಲಂಬಿಯಾ, ವೆನೆಜುವೆಲಾ ಮತ್ತು ಲ್ಯಾಟಿನ್ ಅಮೆರಿಕದಿಂದ ಬಂದವರು.
ಕೆನಡಾದಲ್ಲಿ ಸುಮಾರು 8.8 ಮಿಲಿಯನ್ ವಲಸಿಗರಿದ್ದಾರೆ, ಅವರಲ್ಲಿ ಹೆಚ್ಚಿನವರು ಭಾರತೀಯರು. ನಂತರದ ಸ್ಥಾನದಲ್ಲಿ ಪಾಕಿಸ್ತಾನ, ಫಿಲಿಪೈನ್ಸ್, ಚೀನಿಯರು, ನೈಜೀರಿಯನ್, ಇರಾನಿಯನ್ ಮತ್ತು ಅಮೆರಿಕನ್ನರು ಸೇರಿದ್ದಾರೆ.
ಯುಎಇಯಲ್ಲಿ ಸುಮಾರು 8.2 ಮಿಲಿಯನ್ ವಲಸಿಗರಿದ್ದು, ಅವರಲ್ಲಿ ಹೆಚ್ಚಿನವರು ಭಾರತೀಯರು, ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶದವರು ಇದ್ದಾರೆ. ಕೆಲವು ಭಾಗಗಳಲ್ಲಿ ಇರಾನ್, ಈಜಿಪ್ಟ್, ಫಿಲಿಪೈನ್ಸ್, ನೇಪಾಳದಿಂದ ಬಂದವರು ಇದ್ದಾರೆ.
ಆಸ್ಟ್ರೇಲಿಯಾದಲ್ಲಿ ಸುಮಾರು 8.1 ಮಿಲಿಯನ್ ವಲಸಿಗರಿದ್ದಾರೆ. ಇವರಲ್ಲಿ ಹೆಚ್ಚಿನವರು ಬ್ರಿಟನ್ ಪ್ರಜೆಗಳು. ನಂತರದಲ್ಲಿ ಭಾರತೀಯರು, ಚೀನಿಯರು, ನ್ಯೂಜಿಲೆಂಡ್, ಫಿಲಿಪಿನೋ, ನೇಪಾಳಿಗಳು ಇದ್ದಾರೆ.
2024-25ರ ಹೊತ್ತಿಗೆ, ರಷ್ಯಾ 6.7 ಮಿಲಿಯನ್ ವಲಸಿಗರನ್ನು ಹೊಂದಿದೆ. ಅವರಲ್ಲಿ ಹೆಚ್ಚಿನವರು ಉಕ್ರೇನಿಯನ್ನರು. ಕೆಲವು ಭಾಗಗಳಲ್ಲಿ ಉಜ್ಬೇಕಿಸ್ತಾನ್, ತಜಿಕಿಸ್ತಾನ್, ಕಿರ್ಗಿಸ್ತಾನ್ ಹಾಗೂ ಮಧ್ಯ ಏಷ್ಯಾದ ದೇಶಗಳಿಂದ ಬಂದವರು.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ವಲಸಿಗರ ಸಂಖ್ಯೆ ಕುಸಿತ ಕಂಡಿದೆ. 2024ರ ಹೊತ್ತಿಗೆ, ಭಾರತೀಯ ಜನಸಂಖ್ಯೆಯ ಸುಮಾರು ಶೇಕಡಾ 0.3ರಷ್ಟು ಜನ ವಲಸಿಗರಾಗಿದ್ದಾರೆ. ಆದಾಗ್ಯೂ ಭಾರತದಿಂದ ವಲಸೆ ಹೋಗುವವರು ಜಗತ್ತಿನಲ್ಲಿಯೇ ಅತಿ ಹೆಚ್ಚು, ಸುಮಾರು 18.1 ಮಿಲಿಯನ್ ಜನರು(ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ವರದಿ 2024ರ ಪ್ರಕಾರ) ವಿದೇಶದಲ್ಲಿ ವಾಸಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.