ADVERTISEMENT

2024ರಲ್ಲಿ 84 ಬಾರಿ ಇಂಟರ್‌‌ನೆಟ್ ಸ್ಥಗಿತ: ವಿಶ್ವದಲ್ಲೇ ಭಾರತ ಎರಡನೇ ಸ್ಥಾನ

ಅಜಿತ್ ಅತ್ರಾಡಿ
Published 25 ಫೆಬ್ರುವರಿ 2025, 6:25 IST
Last Updated 25 ಫೆಬ್ರುವರಿ 2025, 6:25 IST
<div class="paragraphs"><p>ಇಂಟರ್‌‌ನೆಟ್ ಸ್ಥಗಿತ</p></div>

ಇಂಟರ್‌‌ನೆಟ್ ಸ್ಥಗಿತ

   

Credit: iStock Photo

ನವದೆಹಲಿ: 2024ರಲ್ಲಿ ಜಾಗತಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

ADVERTISEMENT

ವಿವಿಧ ಕಾರಣಗಳಿಗೆ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವ ರಾಷ್ಟ್ರಗಳ ಕುರಿತು ಅಕ್ಸೆಸ್ ನೌ ವರದಿ ತಯಾರಿಸಿದ್ದು, 2024ರಲ್ಲಿ ಭಾರತದಲ್ಲಿ ಒಟ್ಟು 84 ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದೆ. ಅಲ್ಲದೆ, ಮೊದಲ ಸ್ಥಾನದಲ್ಲಿರುವ ಮ್ಯಾನ್ಮಾರ್‌ನಲ್ಲಿ ಒಟ್ಟು 85 ಬಾರಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.

2023ರಲ್ಲಿ ಭಾರತದಲ್ಲಿ ಒಟ್ಟು 116 ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಆದೇ ರೀತಿ ಕಳೆದ ಆರು ವರ್ಷಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಿರುವ ದೇಶವಾಗಿ ಭಾರತವನ್ನು ಹೆಸರಿಸದಿರುವುದು ಇದೇ ಮೊದಲು ಎಂದು ವರದಿ ಉಲ್ಲೇಖಿಸಿದೆ.

ಭಾರತದ 16 ರಾಜ್ಯಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಮಣಿಪುರದಲ್ಲಿ ಅತಿ ಹೆಚ್ಚು ಬಾರಿ (21), ಹರಿಯಾಣದಲ್ಲಿ 12 ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 12 ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿ 41 ಬಾರಿ ಮತ್ತು ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ 23 ಬಾರಿ ಇಂಟರ್‌ನೆಟ್ ನಿರ್ಬಂಧ ವಿಧಿಸಲಾಗಿತ್ತು.

ಕಳೆದ ವರ್ಷ ಸರ್ಕಾರಿ ಉದ್ಯೋಗಗಳಿಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳೆ ಐದು ಬಾರಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.

2024ರಲ್ಲಿ 54 ದೇಶಗಳಲ್ಲಿ ಒಟ್ಟು 296 ಬಾರಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 2023ರಲ್ಲಿ 39 ದೇಶಗಳಲ್ಲಿ 283 ಬಾರಿ ಇಂಟರ್‌ನೆಟ್ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು.

ಪಾಕಿಸ್ತಾನ, ರಷ್ಯಾ, ಉಕ್ರೇನ್‌, ಪ್ಯಾಲೆಸ್ಟೀನ್‌ ಮತ್ತು ಬಾಂಗ್ಲಾದೇಶ ಸಹಿತ ವಿವಿಧ ರಾಷ್ಟ್ರಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು ಎಂದು ಅಕ್ಸೆಸ್ ನೌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.