ADVERTISEMENT

ಪ್ರಕಾಶ್ ಕಾರಟ್‌ ಇ–ಮೇಲ್‌ಗಳ ತನಿಖೆ

‘ನ್ಯೂಸ್‌ಕ್ಲಿಕ್‌’ ಸುದ್ದಿಪೋರ್ಟಲ್‌ ನಂಟಿನ ಹಣ ಅಕ್ರಮ ವರ್ಗಾವಣೆ ಆರೋಪ

ಪಿಟಿಐ
Published 10 ಆಗಸ್ಟ್ 2023, 18:27 IST
Last Updated 10 ಆಗಸ್ಟ್ 2023, 18:27 IST
ಪ್ರಕಾಶ್‌ ಕಾರಟ್‌
ಪ್ರಕಾಶ್‌ ಕಾರಟ್‌   

ನವದೆಹಲಿ (ಪಿಟಿಐ): ‘ನ್ಯೂಸ್‌ಕ್ಲಿಕ್‌’ ಸುದ್ದಿಪೋರ್ಟಲ್‌ ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪ ಕುರಿತ ತನಿಖೆ ಭಾಗವಾಗಿ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಹಾಗೂ ಸಿಪಿಎಂ ಹಿರಿಯ ನಾಯಕ ಪ್ರಕಾಶ್‌ ಕಾರಟ್‌ ನಡುವೆ ವಿನಿಮಯವಾಗಿರುವ ಇ‍–ಮೇಲ್‌ಗಳ ಬಗ್ಗೆಯೂ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸಲಿದೆ.

ಚೀನಾ ಪರ ನಿಲುವುಗಳನ್ನು ಪ್ರಚುರಪಡಿಸುವ ಸಲುವಾಗಿ ನ್ಯೂಸ್‌ಕ್ಲಿಕ್‌ ಪೋರ್ಟಲ್, ಉದ್ಯಮಿ ಸಿಂಘಂ ಅವರಿಂದ ಸಂಶಯಾಸ್ಪದ ರೀತಿ ಹಣ ಪಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಈ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಗುರುವಾರ ಹೇಳಿವೆ.

ನ್ಯೂಸ್‌ಕ್ಲಿಕ್‌ ಪೋರ್ಟಲ್‌ನಿಂದ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಕುಟುಂಬ ಸದಸ್ಯರಿಗೆ ₹ 40 ಲಕ್ಷದಷ್ಟು, ಪತ್ರಕರ್ತ ಮತ್ತು ಲೇಖಕ ಪರಂಜಯ ಗುಹಾ ಠಾಕೂರ್ತಾ, ಸಂಸ್ಥೆಯ ಕೆಲ ಸಿಬ್ಬಂದಿ ಹಾಗೂ ಕೆಲ ಸ್ವತಂತ್ರ ಪತ್ರಕರ್ತರಿಗೆ ಅಂದಾಜು ₹ 72 ಲಕ್ಷ ವರ್ಗಾಯಿಸಲಾಗಿದೆ ಎನ್ನಲಾಗಿದೆ. 

ADVERTISEMENT

ಸದ್ಯ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಗೌತಮ್ ನೌಲಖಾ ಅವರಿಗೆ ‘ವೇತನ’ ರೂಪದಲ್ಲಿ ₹ 17.08 ಲಕ್ಷ, ಪೋರ್ಟಲ್‌ನ ಪಾಲುದಾರರೂ ಆಗಿರುವ ಸಿಪಿಎಂನ ಐಟಿ ವಿಭಾಗದ ಸದಸ್ಯ ಬಪ್ಪಾದಿತ್ಯ ಸಿನ್ಹಾ ಅವರಿಗೆ ₹ 97.32 ಲಕ್ಷ ‘ನ್ಯೂಸ್‌ಕ್ಲಿಕ್’ ಸಂದಾಯ ಮಾಡಿರುವುದು ಗೊತ್ತಾಗಿದೆ ಎಂದು ತಿಳಿಸಿವೆ.

ಸಿಂಘಂ ನಂಟಿರುವ ಕಂಪನಿಗಳಿಂದ ‘ನ್ಯೂಸ್‌ಕ್ಲಿಕ್’ ಮಾತೃಸಂಸ್ಥೆ ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೊ ಪ್ರೈವೇಟ್‌
ಲಿಮಿಟೆಡ್‌ಗೆ ₹ 86 ಕೋಟಿಗೂ ಅಧಿಕ ಹಣ ಹರಿದು
ಬಂದಿದೆ ಎನ್ನಲಾಗಿದೆ. ಈ ಸಂಬಂಧ ‘ನ್ಯೂಸ್‌ಕ್ಲಿಕ್’ ಪ್ರವರ್ತಕರು ಮತ್ತಿತರರ ವಿರುದ್ಧ ತನಿಖೆ ನಡೆಸಿರುವ ಇ.ಡಿ ದೋಷಾರೋಪ ಪಟ್ಟಿ ಸಲ್ಲಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.