
ನವದೆಹಲಿ: ₹5,900 ಕೋಟಿಗೂ ಅಧಿಕ ಹೂಡಿಕೆಯ ವಂಚನೆಗೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿ ಕ್ರಮ ಕೈಗೊಳ್ಳಲು ಮುಂದಾದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳನ್ನು ತಡೆದು, ಬೆದರಿಸಿದ ಆರೋಪದ ಕಾರಣ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.
ಕಲ್ಯಾಣ್ ಬ್ಯಾನರ್ಜಿ ಎಂಬುವರು ಬಂಧಿತ ವ್ಯಕ್ತಿ. ಸಿಕಂದರಾಬಾದ್‌ನ ಅವರಿಗೆ ಸೇರಿದ ಸ್ಥಳದಲ್ಲಿ ದಾಳಿ ನಡೆದಿತ್ತು. ನಾಂಪಲ್ಲಿ ವಿಶೇಷ ನ್ಯಾಯಾಲಯ ಜನವರಿ 23ರವರೆಗೆ ವಶಕ್ಕೆ ನೀಡಿದೆ ಎಂದು ಇ.ಡಿ.ಅಧಿಕಾರಿಗಳು ತಿಳಿಸಿದ್ದಾರೆ.
ನೊಹೆರಾ ಶೇಖ್ ಮತ್ತಿತರರು ಜನರಿಂದ ₹5,978 ಕೋಟಿ ಹಣ ಸಂಗ್ರಹಿಸಿ, ವಾರ್ಷಿಕ ಶೇ 36ರಷ್ಟು ಲಾಭ ಕೊಡುವುದಾಗಿ ನಂಬಿಸಿದ್ದರು. ಆದರೆ ಮೂಲಧನವನ್ನೂ ನೀಡದೆ ವಂಚಿಸಿದ್ದರು. ನೊಹೆರಾ ಬಳಿ ಕಲ್ಯಾಣ್ ಬ್ಯಾನರ್ಜಿ ಕಮಿಷನ್ ಪಡೆದು ವಂಚನೆಗೆ ಸಹಕರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಇ.ಡಿ, ₹428 ಕೋಟಿ ಮೌಲ್ಯದ ಸಂಪತ್ತು ಜಪ್ತಿ ಮಾಡಿ, ಹರಾಜು ಹಾಕಲು ಸುಪ್ರೀಂ ಕೋರ್ಟ್ ಅನುಮತಿಯನ್ನೂ ಪಡೆದಿತ್ತು.
ಹಿರಿಯ ರಾಜಕಾರಣಿಗಳು, ಅಧಿಕಾರಿಗಳ ಆಪ್ತರಾಗಿದ್ದ ಬ್ಯಾನರ್ಜಿ, ಅಧಿಕಾರಿಗಳ ಮೇಲೆ ಪ್ರಭಾವ, ಒತ್ತಡ ಬೀರುವ ಮೂಲಕ ಹರಾಜು ಪ್ರಕ್ರಿಯೆ ತಡೆಯಲು ಯತ್ನಿಸಿದ್ದರು ಎಂದು ಇ.ಡಿ. ಆರೋಪಿಸಿದೆ.
‘ವಿವಿಧ ಇಲಾಖೆಗಳು, ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಲಹೆಗಾರ ಎಂದೂ ಬ್ಯಾನರ್ಜಿ ಹೇಳಿಕೊಂಡಿದ್ದರು. ಅವರ ಮೊಬೈಲ್‌ನಲ್ಲಿ ದೊರೆತ ವಾಟ್ಸ್‌ಆ್ಯಪ್ ಸಂದೇಶಗಳು ಶೇಕ್ ಮತ್ತು ಇತರರ ಜೊತೆ ಸೇರಿ ಅಪರಾಧ ಎಸಗಿರುವ ಸುಳಿವು ನೀಡಿದ್ದವು. ನೊಹೆರಾ ಸೂಚನೆಗಳನ್ನು ಪಾಲಿಸುತ್ತಿದ್ದುದಾಗಿ ಹೇಳಿಕೆ ನೀಡಿದಾಗ ಬ್ಯಾನರ್ಜಿ ಒಪ್ಪಿಕೊಂಡಿದ್ದಾರೆ‘ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.