ADVERTISEMENT

ಐಪಿಎಲ್‌ ಪಂದ್ಯಗಳು ಸೇರಿದಂತೆ ದೊಡ್ಡ ಕಾರ್ಯಕ್ರಮಗಳಿಗೆ ನಿಷೇಧ: ಮನೀಷ್ ಸಿಸೋಡಿಯಾ

ಏಜೆನ್ಸೀಸ್
Published 13 ಮಾರ್ಚ್ 2020, 8:41 IST
Last Updated 13 ಮಾರ್ಚ್ 2020, 8:41 IST
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ   

ನವದೆಹಲಿ: ಜಾಗತಿಕವಾಗಿ ಭೀತಿ ಸೃಷ್ಟಿಸಿರುವ ಕೊರೊನಾವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ದೆಹಲಿ ಸರ್ಕಾರವು ಹಲವು ಮುಂಜಾಗ್ರತಾ ಕ್ರಮಗಳನ್ನು ಶುಕ್ರವಾರ ಘೋಷಿಸಿದ್ದು, ರಾಜಧಾನಿಯಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಪಂದ್ಯಗಳಿಗೆ ನಿಷೇಧ ಹೇರಿದೆ.

ಸಾವಿರಾರು ಸಂಖ್ಯೆಯ ಜನರು ಒಂದೆಡೆ ಸೇರಲು ಅನುವು ಮಾಡಿಕೊಡುವ ಐಪಿಎಲ್ ಪಂದ್ಯಾವಳಿಗಳಂತ ಕ್ರೀಡಾ ಚಟುವಟಿಕೆಗಳನ್ನು ರದ್ದು ಮಾಡಲು ನಾವು ನಿರ್ಧರಿಸಿದ್ದೇವೆ. ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಯಲು ಜನರು ಗುಂಪು ಸೇರುವುದನ್ನು ತಡೆಯುವುದು ಮುಖ್ಯವಾಗುತ್ತದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.

200ಕ್ಕೂ ಅಧಿಕ ಜನರು ಒಂದೆಡೆ ಸೇರುವಂತ ಸೆಮಿನಾರ್, ಕಾನ್ಫರೆನ್ಸ್ ಅಥವಾ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಯಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ದಕ್ಷಿಣ ಕೊರಿಯಾದಲ್ಲಿ 30 ಜನರಿಗೆ ನಿರ್ಬಂಧ ವಿಧಿಸಿರುವ ಮತ್ತು ಒಂದೆಡೆ ಸೇರುವುದಕ್ಕೆ ತಡೆ ನೀಡಿರುವುದನ್ನು ಉಲ್ಲೇಖಿಸಿದ ಅವರು, 31 ಜನರಿಂದ 10 ಸಾವಿರ ಜನರಿಗೆ ವೈರಸ್ ಹರಡಿತು. ದೆಹಲಿಯಲ್ಲಿ ಇದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಯತ್ನಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಜನರು ಒಂದೆಡೆ ಸೇರುವುದನ್ನು ತಡೆಯುವುದೇ ದೊಡ್ಡ ಪರಿಹಾರವಾಗಿದೆ ಎಂದು ಹೇಳಿದರು.

ಸರ್ಕಾರವು ನೀಡಿರುವ ಸೂಚನೆಗಳನ್ನು ನಗರಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಎಸ್‌ಡಿಎಂ‌ಗಳಿಗೆ ಸೂಚಿಸಿದ್ದಾರೆ.

ಇದಕ್ಕೂ ಮುನ್ನ ದೆಹಲಿ ಸರ್ಕಾರವು ಮಾರ್ಚ್ 31ರವರೆಗೆ ಎಲ್ಲ ಸಿನಿಮಾ ಥಿಯೇಟರ್‌ಗಳನ್ನು ಮುಚ್ಚುವಂತೆ ಆದೇಶಿಸಿತ್ತು. ಕೋವಿಡ್-19 ಅನ್ನು ಶೀಘ್ರವಾಗಿ ಹೆಚ್ಚಾಗುವ ಸಾಂಕ್ರಾಮಿಕ ರೋಗವೆಂದು ದೆಹಲಿ ಸರ್ಕಾರ ಘೋಷಿಸಿದೆ. ವೈರಸ್ ಹರಡುವುದನ್ನುತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಎಲ್ಲ ಸಿನಿಮಾ ಥಿಯೇಟರ್‌ಗಳು, ಶಾಲೆ, ಕಾಲೇಜುಗಳನ್ನು ಮಾರ್ಚ್ 31ರವರೆಗೆ ಮುಚ್ಚಬೇಕು. ಆದರೆ ಪರೀಕ್ಷೆಗಳು ಮಾತ್ರ ನಿಗಧಿಯಂತೆ ನಡೆಯುತ್ತವೆ. ಹೆಚ್ಚು ಜನರು ಒಂದೆಡೆಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.