
ನವದೆಹಲಿ: ಸರ್ಕಾರ ವಿರೋಧಿ ಪ್ರತಿಭಟನೆಗಳಿಂದಾಗಿ ಅಮೆರಿಕದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಇಂಡಿಗೊ ಪ್ರಯಾಣ ಸಲಹೆಯನ್ನು ನೀಡಿದ್ದು, ಕೆಲವು ಅಂತರರಾಷ್ಟ್ರೀಯ ವಿಮಾನಗಳು ಪರ್ಯಾಯ ಮಾರ್ಗದಲ್ಲಿ ಹಾರಾಟ ನಡೆಸುವ ದೃಷ್ಟಿಯಿಂದ ವಿಳಂಬವಾಗಬಹುದು ಎಂದು ತಿಳಿಸಿವೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಏರ್ ಇಂಡಿಯಾ, ‘ಇರಾನ್‌ನಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಹೀಗಾಗಿ, ನಮ್ಮ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಇರಾನ್ ಪ್ರದೇಶಗಳ ಮೇಲೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನಗಳು ಈಗ ಪರ್ಯಾಯ ಮಾರ್ಗವನ್ನು ಬಳಸುತ್ತಿವೆ. ಇದು ವಿಳಂಬಕ್ಕೆ ಕಾರಣವಾಗಬಹುದು’ಎಂದು ಹೇಳಿದೆ.
ಮಾರ್ಗ ಬದಲಾಯಿಸಲು ಸಾಧ್ಯವಾಗದ ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆಯು ತಿಳಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ವಿಮಾನದ ಹಾರಾಟದ ಸ್ಥಿತಿಯನ್ನು ಪರಿಶೀಲಿಸುವಂತೆ ವಿನಂತಿಸಿದೆ.
‘ಈ ಅನಿರೀಕ್ಷಿತ ಅಡಚಣೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ’ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಇರಾನ್‌ನಲ್ಲಿ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ತನ್ನ ಕೆಲವು ಅಂತರರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೊ ಸಾಮಾಜಿಕ ಮಾಧ್ಯಮ ವೇದಿಕೆ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಬೆಳವಣಿಗೆ ತನ್ನ ನಿಯಂತ್ರಣ ಮೀರಿದೆ ಎಂದು ಅದು ಹೇಳಿದೆ. ಪ್ರಯಾಣಿಕರು ತಮ್ಮ ವಿಮಾನದ ಹಾರಾಟ ಸ್ಥಿತಿಯನ್ನು ಪರಿಶೀಲಿಸುವಂತೆ, ತಮಗೆ ಹೊಂದಿಕೊಳ್ಳುವ ಮರುಬುಕಿಂಗ್ ಆಯ್ಕೆಗಳನ್ನು ಮಾಡಿಕೊಳ್ಖಲು ಅಥವಾ ಮರುಪಾವತಿಯನ್ನು ಪಡೆಯಲು ವಿಮಾನಯಾನ ಸಂಸ್ಥೆ ಪ್ರಯಾಣಿಕರನ್ನು ಒತ್ತಾಯಿಸಿದೆ.
‘ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಪರಿಣಾಮ ಬೀರುವ ಗ್ರಾಹಕರಿಗೆ ಉತ್ತಮ ಪರ್ಯಾಯ ಮಾರ್ಗಗಳನ್ನು ನೀಡುವ ಮೂಲಕ ಬೆಂಬಲ ನೀಡಲು ನಮ್ಮ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ" ಎಂದು ಇಂಡಿಗೊ ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್ ಬುಧವಾರ ತಡರಾತ್ರಿ ವಿಶೇಷ ಅನುಮತಿಯೊಂದಿಗೆ ದೇಶಕ್ಕೆ ಬರುವ ಅಥವಾ ದೇಶದಿಂದ ಹೊರಡುವ ವಿಮಾನಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.
ಇರಾನ್‌ನ ಪ್ರತಿಭಟನಾಕಾರರಿಗೆ ಬೆಂಬಲವಾಗಿ ಅಮೆರಿಕ ಮಿಲಿಟರಿ ಕ್ರಮವು ಸಮೀಪಿಸುತ್ತಿದೆ ಎಂಬ ಪಾಶ್ಚಿಮಾತ್ಯ ಮಿಲಿಟರಿ ಅಧಿಕಾರಿಗಳಿಂದ ಹೆಚ್ಚುತ್ತಿರುವ ಬೆದರಿಕೆಗಳ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ತನ್ನ ಅತಿದೊಡ್ಡ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ನಾಯಕತ್ವಕ್ಕೆ ಕಠಿಣ ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಅಮೆರಿಕ ಮಧ್ಯಪ್ರಾಚ್ಯದಲ್ಲಿರುವ ತನ್ನ ವಾಯುನೆಲೆಗಳಿಂದ ಕೆಲವು ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿದರೆ ಅಮೆರಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಮರು ದಾಳಿ ನಡೆಸುವುದಾಗಿ ಇರಾನಿನ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.