ಸಂಘರ್ಷ ಪೀಡಿತ ಇರಾನ್‌ನಿಂದ ಭಾರತಕ್ಕೆ ವಾಪಸ್ಸಾದ ವಿದ್ಯಾರ್ಥಿಗಳು
ಪಿಟಿಐ ಚಿತ್ರ
ನವದೆಹಲಿ: ‘ವಾಸವಿದ್ದ ಕಟ್ಟಡದ ಸಮೀಪದ ಜಾಗದಲ್ಲಿ ಕ್ಷಿಪಣಿಗಳು ಅಪ್ಪಳಿಸುತ್ತಿದ್ದುದನ್ನು ನೋಡಿ ದಂಗಾಗಿದ್ದೆವು. ಬಾಂಬ್‌ಗಳು ಬಿದ್ದು ಭಾರಿ ಸ್ಫೋಟ ಕೇಳಿ ಬೆಚ್ಚಿ ಬೀಳುತ್ತಿದ್ದೆವು...’ ಸಂಘರ್ಷ ಪೀಡಿತ ಇರಾನ್‌ನಿಂದ ಭಾರತಕ್ಕೆ ಮರಳಿರುವ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ಇಸ್ರೇಲ್‌ನ ದಾಳಿಯನ್ನು ಮೆಲುಕು ಹಾಕಿದ ಪರಿ ಇದು.
ಇರಾನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಅರ್ಮೇನಿಯಾಕ್ಕೆ ಕರೆತಂದು ನಂತರ ಭಾರತಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ‘ಆಪರೇಷನ್ ಸಿಂಧೂ’ ಹೆಸರಿನಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದೆ. ಮೊದಲ ತಂಡ ಗುರುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
‘ಕ್ಷಿಪಣಿಗಳು ಹಾಗೂ ಬಾಂಬ್ ದಾಳಿಗಳಿಂದ ಹೆದರಿದ್ದು ಮಾತ್ರವಲ್ಲ ನಾವು ಸ್ತಂಭೀಭೂತರಾಗಿದ್ದೆವು’ ಎಂದು ವೈದ್ಯಕೀಯ ವಿದ್ಯಾರ್ಥಿ ಕಾಶ್ಮೀರದ ಮಿರ್ ಖಲೀಫ್ ಹೇಳುತ್ತಾರೆ.
‘ಇರಾನ್‌ನಲ್ಲಿ ಅನುಭವ ಈಗಲೂ ನನ್ನನ್ನು ದುಃಸ್ವಪ್ನದಂತೆ ಕಾಡುತ್ತಿದೆ. ಮೊದಲು ಅರ್ಮೇನಿಯಾಕ್ಕೆ ಕರೆತಂದು ನಂತರ ಭಾರತಕ್ಕೆ ಕರೆದುಕೊಂಡು ಬಂದಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ’ ಎನ್ನುತ್ತಾರೆ ಖಲೀಫ್.
‘ಎಲ್ಲಿ ನೋಡಿದರೂ ಧ್ವಂಸಗೊಂಡಿರುವ ಕಟ್ಟಡಗಳೇ ಕಾಣಸಿಗುತ್ತವೆ. ಆಗಸದಿಂದ ಕ್ಷಿಪಣಿಗಳು ಅಪ್ಪಳಿಸುತ್ತಿದ್ದುದನ್ನು ನಾವು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನೋಡಿದೆವು. ಟೆಹರಾನ್ ಹಾಳಾಗಿದೆ. ಪರಿಸ್ಥಿತಿ ಭೀಕರವಾಗಿದೆ’ ಎಂದು ದೆಹಲಿಯ ವಿದ್ಯಾರ್ಥಿ ಅಲಿ ಅಕ್ಬರ್ ಹೇಳುತ್ತಾರೆ.
ಭಾರತೀಯ ವಿದ್ಯಾರ್ಥಿಗಳಿದ್ದ ವಿಮಾನ ದೆಹಲಿಗೆ ಬಂದಿಳಿದಾಗ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್ ಅವರು ವಿಮಾನ ನಿಲ್ದಾಣದಲ್ಲಿದ್ದು ಎಲ್ಲರನ್ನು ಬರಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.