ADVERTISEMENT

ಐಆರ್‌ಸಿಟಿಸಿಯಿಂದ ಐದು ದಿನಗಳ ದುಬೈ ಪ್ರವಾಸ: ಪ್ರತಿ ವ್ಯಕ್ತಿಗೆ ₹95 ಸಾವಿರ

ಪ್ರತಿ ವ್ಯಕ್ತಿಗೆ ₹95 ಸಾವಿರ, ನಾಲ್ಕು ರಾತ್ರಿ, ಐದು ಹಗಲು

ಪಿಟಿಐ
Published 4 ಜನವರಿ 2026, 14:53 IST
Last Updated 4 ಜನವರಿ 2026, 14:53 IST
ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಕನ್ನ
ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಕನ್ನ   

ಜೈಪುರ: ಭಾರತೀಯ ರೈಲ್ವೆ ಸಚಿವಾಲಯದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್(ಐಆರ್‌ಸಿಟಿಸಿ) ಇದೇ ತಿಂಗಳಲ್ಲಿ ದುಬೈ ಪ್ರವಾಸದ ವಿಶೇಷ ಪ್ಯಾಕೇಜ್ ಆಯೋಜಿಸುತ್ತಿದೆ.

ಈ ಪ್ರವಾಸ ಪ್ಯಾಕೇಜ್‌ಗೆ ಗಣರಾಜ್ಯೋತ್ಸವವೂ ಜೊತೆಯಾಗುತ್ತಿದೆ. ಬುಕ್ಕಿಂಗ್ ಆರಂಭವಾಗಿದ್ದು, ಜನವರಿ 6ರವರೆಗೂ ತೆರೆದಿರುತ್ತದೆ.

ನಾಲ್ಕು ರಾತ್ರಿ, ಐದು ದಿನಗಳ ಪ್ರವಾಸದ ಪ್ಯಾಕೇಜ್‌ ದರ ಪ್ರತಿ ವ್ಯಕ್ತಿಗೆ ₹94,730. ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ಕೊಚ್ಚಿ ನಗರಗಳ ಪ್ರವಾಸಿಗರು ದುಬೈ ಪ್ರವಾಸಕ್ಕೆ ಹೋಗಬಹುದು. ನಾಲ್ಕಾರು ಪ್ರವಾಸಿಗರು ಒಟ್ಟಾಗಿ, ಗುಂಪು ರಚಿಸಿಕೊಂಡು ಪ್ರವಾಸ ಮಾಡಲು ಅವಕಾಶವಿದೆ. ಈ ಮೂಲಕ ವಿದೇಶದಲ್ಲಿ ಭಾರತದ ಏಕತೆ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸಬಹುದಾಗಿದೆ ಎಂದು ಐಆರ್‌ಸಿಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ADVERTISEMENT

ಈ ಪ್ಯಾಕೇಜ್‌ನಲ್ಲಿ ದುಬೈನಿಂದ ಮರು ಪ್ರಯಾಣದ ವಿಮಾನ ಟಿಕೆಟ್ ದರ, ತ್ರೀ-ಸ್ಟಾರ್ ಹೋಟೆಲ್‌ಗಳಲ್ಲಿ ವಸತಿ, ವೀಸಾ ಶುಲ್ಕಗಳು, ಊಟ, ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸಿ ಪ್ರವಾಸಿ ತಾಣಗಳ ವೀಕ್ಷಣೆ,  ಮರುಭೂಮಿ ಸಫಾರಿ ಮತ್ತು ಪ್ರಯಾಣ ವಿಮೆಯೂ ಸೇರಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಪ್ರವಾಸದಲ್ಲಿ ಬುರ್ಜ್‌ ಖಲೀಫಾ ಬೆಳಕು ಮತ್ತು ಧ್ವನಿ ಪ್ರದರ್ಶನ, ಪಾಮ್ ಜುಮೇರಾ, ಮಿರಾಕಲ್ ಗಾರ್ಡನ್, ಬುರ್ಜ್ ಅಲ್ ಅರಬ್, ಗೋಲ್ಡ್ ಮತ್ತು ಸ್ಪೈಸ್ ಸೌಕ್‌ಗಳನ್ನು ಕಣ್ತುಂಬಿಕೊಳ್ಳಬಹುದು.

‘ಪ್ರವಾಸದ ವೇಳೆ ದುಬೈನ ಚಿನ್ನದ ಮಾರುಕಟ್ಟೆಯಲ್ಲಿ ಖರೀದಿಗೆ ಸಮಯ ನೀಡಲಾಗುತ್ತದೆ. ಒಂದು ದಿನ ಅಬು ಧಾಬಿ ಪ್ರವಾಸವಿರುತ್ತದೆ. ಜೊತೆಗೆ ಶೇಖ್ ಜೈದ್ ಮಸೀದಿ ಮತ್ತು  ದೇವಸ್ಥಾನಗಳ ಭೇಟಿಯೂ ಇರುತ್ತದೆ’ ಎಂದು ಜೈಪುರದ ಐಆರ್‌ಸಿಟಿಸಿಯ ಹೆಚ್ವುವರಿ ಪ್ರಧಾನ ವ್ಯವಸ್ಥಾಪಕ ಯೋಗೇಂದ್ರ ಸಿಂಗ್ ಗುರ್ಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.