ನವದೆಹಲಿ: ಐಆರ್‌ಸಿಟಿಸಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್, ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಿರುದ್ಧ ಇಲ್ಲಿನ ನ್ಯಾಯಾಲಯವೊಂದು ಸೋಮವಾರ ದೋಷಾರೋಪ ನಿಗದಿ ಮಾಡಿದೆ.
ಬಿಹಾರ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವಾಗಲೇ ಈ ಬೆಳವಣಿಗೆ ನಡೆದಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು, ರಾಬ್ಡಿ ದೇವಿ ಹಾಗೂ ತೇಜಸ್ವಿ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಮೋಸದ ಆರೋಪ ಹೊರಿಸಿದ್ದಾರೆ. ಐಆರ್‌ಸಿಟಿಸಿಯ ಎರಡು ಹೋಟೆಲ್‌ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸುವ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಾಲು ಪ್ರಸಾದ್ ವಿರುದ್ಧ ಕೋರ್ಟ್ ದೋಷಾರೋಪ ಹೊರಿಸಿದೆ. ಪ್ರಕರಣದಲ್ಲಿ ಈ ಮೂವರು ತಪ್ಪೊಪ್ಪಿಕೊಂಡಿಲ್ಲ. ಆದೇಶದ ವಿಸ್ತೃತ ಪ್ರತಿ ಲಭ್ಯವಾಗಬೇಕಷ್ಟೇ.
ದೋಷಾರೋಪ ನಿಗದಿ ಮಾಡುವ ಆದೇಶದ ವೇಳೆ ಮೂವರು ಖುದ್ದಾಗಿ ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಮೂವರಿಗೂ ಕೋರ್ಟ್ ಸೆಪ್ಟೆಂಬರ್ 24ರಂದು ಸೂಚಿಸಿತ್ತು.
ಸಿಬಿಐ ಚಾರ್ಜ್‌ಶೀಟ್ ಪ್ರಕಾರ, 2004 –2014ರ ಅವಧಿಯಲ್ಲಿ ಈ ಅವ್ಯವಹಾರ ನಡೆದಿದ್ದು, ಪುರಿ ಹಾಗೂ ರಾಂಚಿಯಲ್ಲಿರುವ ಭಾರತೀಯ ರೈಲ್ವೆಯ ಬಿಎನ್‌ಆರ್ ಹೋಟೆಲ್‌ಗಳನ್ನು ಮೊದಲು ಐಆರ್‌ಸಿಟಿ ವರ್ಗಾಯಿಸಿ ಬಳಿಕ ಅದರ ನಿರ್ವಹಣೆಯನ್ನು ಪಟ್ನಾ ಮೂಲದ ಸುಜಾತ ಹೋಟೆಲ್ಸ್ ಪ್ರೈವೆಟ್ ಲಿಮಿಟೆಡ್‌ಗೆ ನೀಡಲಾಗಿತ್ತು.
ಸುಜಾತ ಹೋಟೆಲ್‌ಗೆ ಸಹಾಯ ಮಾಡಲು ಟೆಂಡರ್ ಪ್ರಕ್ರಿಯೆಯಲ್ಲಿ ಕೃತ್ರಿಮ ನಡೆಸಲಾಗಿತ್ತು ಎಂದು ಸಿಬಿಐ ಆರೋಪಿಸಿತ್ತು.
ಚಾರ್ಜ್‌ಶೀಟ್‌ನಲ್ಲಿ ಐಆರ್‌ಸಿಟಿಸಿಯ ಸಮೂಹ ವ್ಯವಸ್ಥಾಪಕರಾದ ವಿ.ಕೆ ಆಸ್ಥಾನ ಹಾಗೂ ಆರ್.ಕೆ ಗೋಯಲ್ ಮತ್ತು ಚಾಣಕ್ಯ ಹೋಟೆಲ್‌ನ ಮಾಲೀಕರು ಹಾಗೂ ಸುಜಾತ ಹೋಟೆಲ್‌ನ ನಿರ್ದೇಶಕರಾದ ವಿಜಯ್ ಕೊಚ್ಚಾರ್, ವಿನಯ್ ಕೊಚ್ಚಾರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.