ADVERTISEMENT

ಅಹಮದಾಬಾದ್ ವಿಮಾನ ಅಪಘಾತದ ತುಂಡು ವರದಿ: ಸುಪ್ರೀಂ ಕೋರ್ಟ್ ಕಿಡಿ

ಪಿಟಿಐ
Published 22 ಸೆಪ್ಟೆಂಬರ್ 2025, 15:35 IST
Last Updated 22 ಸೆಪ್ಟೆಂಬರ್ 2025, 15:35 IST
ಪ್ರಾತಿನಿಧಿಕ (ಪಿಟಿಐ ಚಿತ್ರ)
ಪ್ರಾತಿನಿಧಿಕ (ಪಿಟಿಐ ಚಿತ್ರ)   

ನವದೆಹಲಿ: ಅಹಮದಾಬಾದ್‌ನಲ್ಲಿ ಜೂನ್ 12ರಂದು ಸಂಭವಿಸಿದ್ದ ಏರ್‌ ಇಂಡಿಯಾ ವಿಮಾನ ಅಪಘಾತದ ಕುರಿತ ಪ್ರಾಥಮಿಕ ತನಿಖೆಯ ವರದಿಯ ಆಯ್ಧ ಭಾಗವನ್ನು ಬಿಡುಗಡೆ ಮಾಡಿರುವುದನ್ನು ‘ದುರದೃಷ್ಟಕರ ಮತ್ತು ಬೇಜವಾಬ್ದಾರಿತನ’ ಎಂದು ಸುಪ್ರೀಂಕೋರ್ಟ್‌ ಸೋಮವಾರ ಖಂಡಿಸಿದೆ. 

ಪೈಲಟ್‌ಗಳ ಲೋಪದಿಂದಾಗಿ ವಿಮಾನ ಅಪಘಾತ ನಡೆದಿದೆ ಎಂದು ವಿವರಿಸುವ ವರದಿಯ ಈ ಆಯ್ದ ಭಾಗಗಳು ಮಾಧ್ಯಮಗಳು ನಿರೂಪಣೆ ರಚಿಸಲು ದಾರಿ ಮಾಡಿಕೊಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್‌. ಕೋಟಿಶ್ವರ್ ಸಿಂಗ್ ಅವರ ಪೀಠವು, ‘ವಿಚಾರಣೆ ಪೂರ್ಣ‌ಗೊಳ್ಳುವವರೆಗೆ ಈ ರೀತಿಯ ವರದಿಗಳು ಸಂಪೂರ್ಣವಾಗಿ ಗೌಪ್ಯವಾಗಿರಬೇಕು. ನಾವು ಅಂತಿಮ ವರದಿಗಾಗಿ ಕಾಯಬೇಕು‌. ಇದರಲ್ಲಿ ಅಪಘಾತದಲ್ಲಿ ಮೃತಪಟ್ಟವರ ಗೌಪ್ಯತೆ ಮತ್ತು ಘನತೆಯ ಅಂಶವೂ ಒಳಗೊಂಡಿತ್ತು’ ಎಂದು ಹೇಳಿದೆ.

ADVERTISEMENT

ಜುಲೈ 12ರಂದು ಬಿಡುಗಡೆಯಾದ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಪ‍್ರಾಥಮಿಕ ವರದಿಯ‌ ಕೆಲವು ಅಂಶಗಳನ್ನು ಪೀಠವು ಟಿಪ್ಪಣಿ ಮಾಡಿಕೊಂಡಿದ್ದು, ಮಾಧ್ಯಮ ನಿರೂಪಣೆಗೆ ಕಾರಣವಾದ ವರದಿಗಳಲ್ಲಿ ‘ತುಂಡು ಮತ್ತು ಆಯ್ಧ’ ಭಾಗಗಳನ್ನು ಪ್ರಕಟಿಸಿದ್ದು ಬೇಜವಾಬ್ದಾರಿತನ ಎಂದು ಟೀಕಿಸಿದೆ.

ಸೇಫ್ಟೀ ಮ್ಯಾಟರ್ಸ್‌ ಫೌಂಡೇಷನ್ ಎಂಬ ಎನ್‌ಜಿಒ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ‘ಅಪಘಾತ ನಡೆದ ನಂತರ ರಚಿಸಲಾದ ತನಿಖಾ ಸಮಿತಿಯಲ್ಲಿ ಮೂವರು ಸದಸ್ಯರು ವಾಯುಯಾನ ನಿಯಂತ್ರಕದವರೇ ಇದ್ದು, ವರದಿಯಲ್ಲಿ ಹಿತಾಸಕ್ತಿ ಸಂಘರ್ಷದ ಸಮಸ್ಯೆ ಇರುತ್ತದೆ’ ಎಂದು ಆರೋಪಿಸಿದ್ದಾರೆ.

‌ಅಪಘಾತಕ್ಕೆ ಪೈಲಟ್‌ಗಳನ್ನು ದೂಷಿಸುವ ಪ್ರಾಥಮಿಕ ವರದಿಯ ಒಂದು ಸಾಲು ಪ್ರಪಂಚದಾದ್ಯಂತ ಮಾಧ್ಯಮಗಳಲ್ಲಿ ನಿರೂಪಣೆಯನ್ನು ನಿರ್ಮಿಸಲು ಕಾರಣವಾಯಿತು ಎಂದು ಈ ಹಿಂದೆಯೆ ಪ್ರಶಾಂತ್ ಭೂಷಣ್ ಹೇಳಿದ್ದರು.

ಜೂನ್ 12ಕ್ಕೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್‌ ಇಂಡಿಯಾ ಅಪಘಾತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 265 ಜನರು ಮೃತಪಟ್ಟಿದ್ದರು. ವಿಮಾನವು ಹಾರಾಟ ಪ್ರಾರಂಭಿಸಿದ ತಕ್ಷಣವೇ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.