ADVERTISEMENT

ತಾಲಿಬಾನ್ ಭಯೋತ್ಪಾದಕ ಸಂಘಟನೆಯೇ? ಅಲ್ಲವೇ?: ಕೇಂದ್ರಕ್ಕೆ ಓಮರ್ ಪ್ರಶ್ನೆ

ಪಿಟಿಐ
Published 1 ಸೆಪ್ಟೆಂಬರ್ 2021, 15:26 IST
Last Updated 1 ಸೆಪ್ಟೆಂಬರ್ 2021, 15:26 IST
ಓಮರ್ ಅಬ್ದುಲ್ಲಾ: ಪಿಟಿಐ ಚಿತ್ರ
ಓಮರ್ ಅಬ್ದುಲ್ಲಾ: ಪಿಟಿಐ ಚಿತ್ರ   

ಶ್ರೀನಗರ: ತಾಲಿಬಾನ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದ್ದೀರೋ ಇಲ್ಲವೋ ಎಂದು ಸ್ಪಷ್ಟಪಡಿಸುವಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ತಾಲಿಬಾನ್ ಜೊತೆ ಭಾರತವು ಅಧಿಕೃತ ಮಾತುಕತೆ ನಡೆಸಿದ ಒಂದು ದಿನದ ನಂತರ ಓಮರ್ ಅಬ್ದುಲ್ಲಾ ಈ ಪ್ರಶ್ನೆ ಎತ್ತಿದ್ದಾರೆ.

‘ಒಂದೋ ತಾಲಿಬಾನ್ ಭಯೋತ್ಪಾದಕ ಸಂಘಟನೆ ಅಥವಾ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿ. ತಾಲಿಬಾನ್ ಸಂಘಟನೆಯನ್ನು ನೀವು (ಕೇಂದ್ರ ಸರ್ಕಾರ) ಹೇಗೆ ನೋಡುತ್ತಿದ್ದೀರಿ ಎಂದು ನಮಗೆ ಸ್ಪಷ್ಟಪಡಿಸಿ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಅವರು ಮಂಗಳವಾರ ದೋಹಾದಲ್ಲಿ ಭಾರತೀಯ ಪ್ರತಿನಿಧಿಯು ತಾಲಿಬಾನ್ ನಾಯಕನನ್ನು ಭೇಟಿಯಾದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ.

ADVERTISEMENT

ಕತಾರ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ನಿನ್ನೆ ತಾಲಿಬಾನ್‌ನ ಹಿರಿಯ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್‌ನನ್ನು ಭೇಟಿಯಾಗಿ ಅಫ್ಘಾನಿಸ್ತಾನದ ನೆಲದಲ್ಲಿ ಭಾರತೀಯ ವಿರೋಧಿ ಚಟುವಟಿಕೆಗಳು ಮತ್ತು ಭಯೋತ್ಪಾದನೆಗೆ ಅವಕಾಶ ನೀಡಬಾರಬದೆಂದು ಸೂಚಿಸಿದ್ದರು. ಇದು ತಾಲಿಬಾನ್ ಜೊತೆ ಭಾರತ ನಡೆಸಿದ ಮೊದಲ ಅಧಿಕೃತ ಮಾತುಕತೆ ಎಂದು ವಿದೇಶಾಂಗ ಇಲಾಖೆ ಹೇಳಿತ್ತು.

‘ತಾಲಿಬಾನ್ ಭಯೋತ್ಪಾದಕ ಸಂಘಟನೆಯೇ? ಒಂದು ಪಕ್ಷ ಇಲ್ಲವೆಂದಾದರೆ, ನೀವು ಅದರ ಹೆಸರನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತೆಗೆಸಲು ವಿಶ್ವಸಂಸ್ಥೆಗೆ ಹೋಗುತ್ತೀರಾ. ಇದೀಗ, ನೀವು (ಭಾರತ) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿದ್ದೀರಿ’ಎಂದು ಅವರು ಕೇಳಿದ್ದಾರೆ.

ತಾಲಿಬಾನ್ ಜೊತೆಗಿನ ಮಾತುಕತೆ ಕುರಿತ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, ತಾಲಿಬಾನ್ ಭಯೋತ್ಪಾದಕ ಸಂಘಟನೆಯಾಗಿದ್ದರೆ ಸರ್ಕಾರವು ಕತಾರ್‌ನಲ್ಲಿ ಅದರೊಂದಿಗೆ ಏಕೆ ಮಾತುಕತೆ ನಡೆಸಿದೆ ಎಂದು ಓಮರ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.