ಚಂಡೀಗಢ: ‘ಮನೆ ಮನೆಗೆ ಸಿಂಧೂರ ಕಳುಹಿಸುವುದು ಬಿಜೆಪಿಯ ‘ಒಂದು ದೇಶ, ಒಬ್ಬ ಗಂಡ’ ಯೋಜನೆಯ ಭಾಗವೇ?’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಕೇಳಿದ್ದಾರೆ.
ಲುಧಿಯಾನ(ಪಶ್ಚಿಮ) ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯು ಆಪರೇಷನ್ ಸಿಂಧೂರ ಹೆಸರಿನಲ್ಲಿ ಮತ ಕೇಳುತ್ತಿದೆ ಎಂಬ ಆರೋಪ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮಾನ್, ‘ಸಿಂಧೂರವನ್ನು ಬಿಜೆಪಿ ತಮಾಷೆಯಾಗಿ ಪರಿವರ್ತಿಸಿದೆ’ ಎಂದಿದ್ದಾರೆ.
‘ಆಪರೇಷನ್ ಸಿಂಧೂರ ಹೆಸರಿನಲ್ಲಿ ಬಿಜೆಪಿ ಮತ ಕೇಳುತ್ತಿದೆ. ಇದೀಗ ಅವರು ಪ್ರತಿ ಮನೆಗೆ ಸಿಂಧೂರ ಕಳುಹಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ನೀವು ಸಿಂಧೂರ ಇಟ್ಟುಕೊಳ್ಳುತ್ತಿರಾ? ಇದು ಬಿಜೆಪಿಯ ‘ಒಂದು ದೇಶ, ಒಬ್ಬ ಗಂಡ’ ಯೋಜನೆಯ ಭಾಗವೇ’ ಎಂದು ಪ್ರಶ್ನಿಸಿದ್ದಾರೆ.
ಮಾನ್ ಹೇಳಿಕೆಯನ್ನು ಖಂಡಿಸಿರುವ ಚಂಡೀಗಢ ಬಿಜೆಪಿ ಘಟಕ, ‘ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹತರಾದವರ ಪತ್ನಿಯರನ್ನು ಮಾನ್ ಅವಮಾನಿಸಿದ್ದಾರೆ’ ಎಂದು ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು,‘ಇಂತಹ ಹೇಳಿಕೆ ಮೂಲಕ, ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದವರ ವಿಧವೆಯರಿಗೆ ಅವಮಾನಿಸಿರುವ ಮುಖ್ಯಮಂತ್ರಿ ಮಾನ್, ಬೇಷರತ್ತಾಗಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಿತ್ತು. ಸೇನಾ ಕಾರ್ಯಾಚರಣೆಯ ಯಶಸ್ಸನ್ನು ದೇಶದ ಉದ್ದಗಲಕ್ಕೂ ತಿಳಿಸಲು ಬಿಜೆಪಿ ಇತ್ತೀಚೆಗೆ ಮನೆ ಮನೆಗೆ ಸಿಂಧೂರ ಕಳುಹಿಸುವ ಅಭಿಯಾನವನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.