ನವದೆಹಲಿ: ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆಯನ್ನು (ಡಾಕಿಂಗ್) ಯಶಸ್ವಿಯಾಗಿ ನಿರ್ವಹಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಈಗ ಅವುಗಳನ್ನು ಬೇರ್ಪಡಿಸುವಲ್ಲಿಯೂ (ಅನ್‌ಡಾಕಿಂಗ್) ಗುರುವಾರ ಯಶ ಕಂಡಿದೆ.
‘ಗುರುವಾರ ಬೆಳಿಗ್ಗೆ 9.20ಕ್ಕೆ ಎರಡು ಸ್ಪೇಡೆಕ್ಸ್ ಉಪಗ್ರಹಗಳನ್ನು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ’ ಎಂದು ಇಸ್ರೊ ಹೇಳಿದೆ.
ಈ ಪ್ರಯೋಗದೊಂದಿಗೆ ಇಸ್ರೊ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದಂತಾಗಿದೆ. ಚಂದ್ರಯಾನ, ಮಾನವಸಹಿತ ಗಗನಯಾನ ಹಾಗೂ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಸೇರಿದಂತೆ ಭವಿಷ್ಯದ ಅಂತರಿಕ್ಷ ಕಾರ್ಯಕ್ರಮಗಳಿಗೆ ದಾರಿ ಸುಗಮಗೊಂಡಂತೆಯೂ ಆಗಿದೆ.
ಉಪಗ್ರಹಗಳನ್ನು ಬೇರ್ಪಡಿಸುವ ಇಸ್ರೊದ ಈ ಸಾಧನೆ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಘೋಷಿಸಿದ್ದಾರೆ.
‘ಸ್ಪೇಡೆಕ್ಸ್ ಯೋಜನೆ ಭಾಗವಾಗಿ ನಂಬಲಸಾಧ್ಯವಾದಂತಹ, ಉಪಗ್ರಹಗಳನ್ನು ಬೇರ್ಪಡಿಸುವ ಕಾರ್ಯವನ್ನು ಸಾಧಿಸಲಾಗಿದೆ. ಭಾರತೀಯ ಅಂತರಿಕ್ಷ ನಿಲ್ದಾಣ, ಚಂದ್ರಯಾನ–4, ಗಗನಯಾನದಂತಹ ಭವಿಷ್ಯದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಈ ಸಾಧನೆ ದಾರಿ ಮಾಡಿಕೊಟ್ಟಿದೆ’ ಎಂದು ಪೋಸ್ಟ್ ಮಾಡಿರುವ ಸಿಂಗ್, ಇಸ್ರೊ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
‘ವೃತ್ತಾಕಾರದ ಕಕ್ಷೆಯೊಂದರಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ತನ್ನ ಸಾಮರ್ಥ್ಯ ಕುರಿತ ಪ್ರಾತ್ಯಕ್ಷಿಕೆಯನ್ನು ಇಸ್ರೊ ಈ (ಸ್ಪೇಡೆಕ್ಸ್) ಪ್ರಯೋಗದ ಮೂಲಕ ಸಾಬೀತುಪಡಿಸಿದೆ’ ಎಂದು ಇಸ್ರೊ ಹೇಳಿದೆ. ‘460 ಕಿ.ಮೀ. ದೂರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಈಗ ಅವು ಉತ್ತಮ ಸ್ಥಿತಿಯಲ್ಲಿದ್ದು ಸ್ವತಂತ್ರವಾಗಿ ಪರಿಭ್ರಮಿಸುತ್ತಿವೆ’ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ‘ಮಾರ್ಚ್ 10ರಿಂದ 25ರ ವರೆಗಿನ ಅವಧಿಯು ಉಪಗ್ರಹಗಳನ್ನು ಬೇರ್ಪಡಿಸಲು ಸೂಕ್ತ ಎಂಬುದು ವಿಶ್ಲೇಷಣೆಯಿಂದ ಗೊತ್ತಾಗಿತ್ತು. ಗುರುವಾರ ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಬೆಂಗಳೂರು ಲಖನೌ ಹಾಗೂ ಮಾರಿಷಸ್‌ನಲ್ಲಿರುವ ಭೂಕೇಂದ್ರಗಳ ಮೂಲಕ ಈ ಸಂಪೂರ್ಣ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲಾಯಿತು’ ಎಂದೂ ತಿಳಿಸಿದೆ.
ಡಿಸೆಂಬರ್ 30 2024 ಯೋಜನೆಯ ‘ಎಸ್‌ಡಿಎಕ್ಸ್–01’ ಹಾಗೂ ‘ಎಸ್‌ಡಿಎಕ್ಸ್–02’ ಉಪಗ್ರಹಗಳ ಉಡ್ಡಯನ
ಜನವರಿ 16 2025 ಎರಡು ಉಪಗ್ರಹಗಳನ್ನು ಜೋಡಿಸುವ (ಡಾಕಿಂಗ್) ಪ್ರಯೋಗ ಯಶಸ್ವಿ
ಮಾರ್ಚ್ 13 2025 ಎರಡು ಉಪಗ್ರಹಗಳನ್ನು ಬೇರ್ಪಡಿಸುವ (ಅನ್‌ಡಾಕಿಂಗ್) ಪ್ರಯೋಗ ಯಶಸ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.