ADVERTISEMENT

ಟಿಎಂಸಿ ಶಾಸಕನ ಮನೆಯಲ್ಲಿ ದೊಡ್ಡ ಪ್ರಮಾಣದ ಹಣ ಪತ್ತೆ

ಪಿಟಿಐ
Published 12 ಜನವರಿ 2023, 14:43 IST
Last Updated 12 ಜನವರಿ 2023, 14:43 IST
   

ಕೋಲ್ಕತ್ತ: ‘ಉದ್ಯಮಿ, ಟಿಎಂಸಿ ಶಾಸಕ ಹಾಗೂ ಮಾಜಿ ಸಚಿವ ಜಾಕಿರ್‌ ಹುಸೇನ್‌ ಅವರ ಮುರ್ಷಿದಾಬಾದ್‌, ಕೋಲ್ಕತ್ತಾ ಹಾಗೂ ದೆಹಲಿಯಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ದೊಡ್ಡ ಪ್ರಮಾಣ ಹಣ ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಬುಧವಾರ ಸಂಜೆಯಿಂದ ಗುರುವಾರ ಬೆಳಗಿನವರೆಗೆ ಕೇಂದೀಯ ಪಡೆಗಳ ಸಹಾಯದಿಂದ ದಾಳಿ ನಡೆಯಿತು. ಹುಸೇನ್‌ ಹಾಗೂ ಅವರ ಕುಟುಂಬಸ್ಥರು ಇಡೀ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದ್ದಾರೆ’ ಎಂದು ತಿಳಿಸಿದರು.

‘ದಾಳಿಯಲ್ಲಿ ದೊರೆತ ದೊಡ್ಡ ಪ್ರಮಾಣದ ನೋಟುಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ’ ಎಂದರು. ದಾಳಿಯ ಕುರಿತು ಪ್ರತಿಕ್ರಿಯೆ ಪಡೆಯಲು ಹುಸೇನ್‌ ಅವರ ಸಂಪರ್ಕಿಸಲಾಗದೂ, ಅವರ ಸಂಪರ್ಕ ಸಾಧ್ಯವಾಗಲಿಲ್ಲ.

ADVERTISEMENT

ದಾಳಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪಕ್ಷದ ಮುಖಂಡ, ಸಚಿವ ಫಿರ್ಹಾದ್‌ ಹಕೀಮ್‌, ‘ದಾಳಿ ವೇಳೆ ದೊರೆತ ಹಣಕ್ಕೆ ದಾಖಲೆಗಳು ಇವೆವೋ ಇಲ್ಲವೋ ಎನ್ನುವುದು ತಾಂತ್ರಿಕ ವಿಷಯವಾಗಿದೆ. ಆದ್ದರಿಂದ ಪಕ್ಷವು ಈ ಕುರಿತು ಪ್ರತಿಕ್ರಿಯಿಸುವುದಿಲ್ಲ. ಆದರೆ, ಹುಸೇನ್‌ ಅವರು ದೊಡ್ಡ ಉದ್ಯಮಿ ಆಗಿದ್ದಾರೆ. ಅವರು ನೂರಾರು ಜನರಿಗೆ ಕೆಲಸ ನೀಡಿದ್ದಾರೆ’ ಎಂದರು.

ಬಿಜೆಪಿ ಮುಖಂಡ ರಾಹುಲ್‌ ಸಿನ್ಹಾ ಮಾತನಾಡಿ, ‘ಟಿಎಂಸಿ ಮುಖಂಡರ ಹಾಗೂ ಅವರಿಗೆ ಸಂಬಂಧಿಸಿದವರ ಮನೆಗಳಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದ ಹಣ ಪತ್ತೆಯಾಗುತ್ತಿದೆ. ಪತ್ತೆಯಾಗಿರುವುದು ಅತ್ಯಲ್ಪ. ಇನ್ನಷ್ಟು ಪ್ರಕರಣಗಳು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಈಗಲೂ ಟಿಎಂಸಿ ಪಕ್ಷವು, ತಾನು ಮುಗ್ಧ, ಇವೆಲ್ಲವೂ ಕೇಂದ್ರ ಸಂಸ್ಥೆಗಳ ಹುನ್ನಾರ ಎನ್ನಲಿದೆಯೇ? ರಾಜ್ಯದ ಜನರು ಎಲ್ಲವನ್ನೂ ನೋಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.