ADVERTISEMENT

ಇಂಧನ ದರ ಏರಿಕೆ ದೇಶ ವಿರೋಧಿ ಕ್ರಮ: ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 11:02 IST
Last Updated 5 ಏಪ್ರಿಲ್ 2022, 11:02 IST
   

ಬೆಂಗಳೂರು: ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಆಗಾಗ್ಗೆ ಟೀಕೆಗೆ ಗುರಿಪಡಿಸುವ ರಾಜ್ಯಸಭೆಯ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ, ಸದ್ಯ ತೈಲ ದರ ಏರಿಕೆ ವಿಚಾರವಾಗಿ ಸೋಮವಾರ ಮತ್ತೊಮ್ಮೆ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದು ದೇಶದಲ್ಲಿ ದಂಗೆಯಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಬೆಲೆ ಏರಿಕೆಯು ಹಣಕಾಸು ಸಚಿವಾಲಯದ ಬೌದ್ಧಿಕ ದಿವಾಳಿತನ. ಇದು ರಾಷ್ಟ್ರವಿರೋಧಿಯೂ ಹೌದು. ಬೆಲೆ ಏರಿಕೆ ಮೂಲಕ ಬಜೆಟ್ ಕೊರತೆಯನ್ನು ಸರಿದೂಗಿಸಿಕೊಳ್ಳುವುದು ಅಸಮರ್ಥತೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸುಬ್ರಮಣಿಯನ್‌ ಸ್ವಾಮಿ ಅವರ ಈ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಟ್ವಿಟರ್‌ ಬಳಕೆದಾರ ನಾಥನ್‌ ಎಂಬುವವರು, ‘ಅಂತರಾಷ್ಟ್ರೀಯ ಇಂಧನ ದರದಿಂದಾಗಿ ಎಲ್ಲಾ ದೇಶಗಳಲ್ಲಿ ಬೆಲೆ ಏರಿಕೆಯಾಗಿದೆ. ಇಂಧನ ಬೆಲೆಗಳನ್ನು ಕಡಿಮೆ ಮಾಡಲು ನಿಮ್ಮ ಬಳಿ ಏನಾದರೂ ಮಾಂತ್ರಿಕ ಪರಿಹಾರವಿದೆಯೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್‌ ಸ್ವಾಮಿ, ‘ತೆರಿಗೆ ಕಡಿತ ಮಾಡಿ’ ಎಂದು ಸಲಹೆ ನೀಡಿದ್ದಾರೆ.

ಯಾವ ದೇಶದಲ್ಲಿಯೂ ಮಾರಾಟದ ಶೇ 60 ಭಾಗ ತೆರಿಗೆಗೆ ಹೋಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಇಂಧನ ದರ ಏರಿಕೆ ಬಗ್ಗೆ ಈ ಹಿಂದೆ ಸುಬ್ರಮಣಿಯನ್‌ ಸ್ವಾಮಿ ಅವರು ಟ್ವಿಟರ್‌ನಲ್ಲಿ ಮಾಡಿದ್ದ ಹೋಲಿಕೆ ವೈರಲ್‌ ಆಗಿತ್ತು. 'ರಾಮನ ಭಾರತದಲ್ಲಿ ಪೆಟ್ರೋಲ್‌ ದರ ₹93, ಸೀತೆಯ ನೇಪಾಳದಲ್ಲಿ ₹53, ರಾವಣನ ಶ್ರೀಲಂಕಾದಲ್ಲಿ ₹51,' ಎಂದು ಅವರು 2021ರ ಫೆ.2ರಂದು ಪೋಸ್ಟ್‌ ಹಂಚಿಕೊಂಡಿದ್ದರು. ಈ ಪೋಸ್ಟ್‌ ಅನ್ನು 1.20 ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.